JNNCE ನಲ್ಲಿ ಇದೇ ವರ್ಷದಿಂದ ಹೊಸ ಕೋರ್ಸ್ ಆರಂಭ, ಸೀಟುಗಳಲ್ಲಿ‌ ಏರಿಕೆ

ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿ(JNNCE)ನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಒಂದು ಹೊಸ ಕೋರ್ಸ್ ಆರಂಭಿಸಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (NES) ಕಾರ್ಯದರ್ಶಿ ಎಸ್.ಎನ್‌.ನಾಗರಾಜ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೊಬೊಟಿಕ್ಸ್ ಮತ್ತು‌ ಮೆಷಿನ್‌ ಲರ್ನಿಂಗ್’ ಕೋರ್ಸ್ ಆರಂಭಿಸಲಾಗುತ್ತಿದೆ. ಈ ಮೂಲಕ ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಆಧಾರದ ಮೇಲೆ ವಿದ್ಯಾರ್ಥಿಗಳ ಕಲಿಕೆ ಮುನ್ನಡೆಯಲಿದೆ ಎಂದು ತಿಳಿಸಿದರು.
ಎಐಸಿಟಿಇ ಅನುಮೋದನೆ ನಂತರ ಪ್ರಸಕ್ತ ವರ್ಷದಿಂದಲೇ 60 ಸೀಟುಗಖ ಪ್ರವೇಶಾತಿ ಪ್ರಾರಂಭವಾಗಲಿದೆ. ಇನ್ಫಾರ್ಮೇಶನ್ ಸೈನ್ಸ್ ಎಂಜಿನಿಯರಿಂಗ್ ಪ್ರವೇಶಾತಿಯನ್ನು 180 ಸೀಟುಗಳಿಗೆ ಹಾಗೂ ಎಂಸಿಎ ಸ್ನಾತಕೋತ್ತರಕ್ಕೆ 90 ಸೀಟುಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.
ವಿ.ಟಿ.ಯು ರ‍್ಯಾಂಕ್
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(VTU)ದ 2020-21 ನೇ ಸಾಲಿನಲ್ಲಿ ಇನ್ಫಾರ್ಮೇಷನ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿನಿ ಪಿ.ಪಲ್ಲವಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು ನಾಲ್ಕು ಬಂಗಾರದ ಪದಕ ಪಡೆದಿದ್ದಾರೆ. ಜತೆಗೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಎಂ.ಟೆಕ್ ವಿದ್ಯಾರ್ಥಿನಿ ಜಿ.ಮಮತಾ ಪ್ರಥಮ ರ‍್ಯಾಂಕ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಎಂ.ಟೆಕ್ ವಿದ್ಯಾರ್ಥಿ ಬಿ.ಎಸ್.ಮಧುಮೂರ್ತಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

READ | ಯೋಗದಲ್ಲಿ‌ ಕರ್ನಾಟಕಕ್ಕೆ ಮೊದಲ ಬಾರಿ ಬೆಳ್ಳಿಯ ಪದಕ‌ ತಂದುಕೊಟ್ಟ ಮಲೆನಾಡಿನ ಪ್ರತಿಭೆ

ಪ್ಲೇಸ್ಮೆಂಟ್’ನಲ್ಲೂ ಸಾಧನೆ
ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಮೂಲಕ ಪ್ರತಿಷ್ಠಿತ ಕಂಪನಿಗಳಾದ ಟಿಸಿಎಸ್, ವಿಪ್ರೊ, ಇನ್ಫೊಸಿಸ್, ಅಸ್ಕೆಂಚರ್, ಟೆಕ್ಸಾಸ್, ಕ್ಯಾಪ್‌ಜೆಮಿನಿ, ಮೈಂಡ್‌ಟ್ರಿ, ರೊಬೊಸಾಫ್ಟ್ ಸೇರಿದಂತೆ ಸುಮಾರು ನೂರಕ್ಕು ಹೆಚ್ಚು ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸುತ್ತಿದ್ದು ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್, ಎಂ.ಸಿ.ಎ, ಎಂ.ಬಿ.ಎ ಸೇರಿದಂತೆ ವಿವಿಧ ವಿಭಾಗಗಳ 700 ಕ್ಕು ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ 4 ಲಕ್ಷದಿಂದ 13 ಲಕ್ಷ ವೇತನದವರೆಗೆ ಆಯ್ಕೆಯಾಗಿದ್ದಾರೆ.
ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ
ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಕಾಲೇಜು ಒಡಂಬಡಿಕೆ ಮಾಡಿಕೊಂಡಿದ್ದು ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪ್ರಸ್ತುತ ಹೆದ್ದಾರಿ ಮತ್ತು ಸಾರಿಗೆ ಕ್ಷೇತ್ರದಲ್ಲಿನ ಹಲವು ಬೆಳವಣಿಗೆ ತಿಳಿಯಲು ಹಾಗೂ ನೂತನ ಯೋಜನೆಗಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಿದೆ.
ನಾವಿನ್ಯ ಚಿಂತನೆಗಳಿಗೆ ಆರ್ಥಿಕ ನೆರವು
ವಿದ್ಯಾರ್ಥಿಗಳ ನಾವಿನ್ಯ ಚಿಂತನೆಗಳಿಗೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ನ್ಯೂ ಜೆನ್ ಐಇಡಿಸಿ ಮೂಲಕ 2.5 ಲಕ್ಷ ಆರ್ಥಿಕ ನೆರವು ಹಾಗೂ ಕರ್ನಾಟಕ ಸರ್ಕಾರದಿಂದ 3 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಜೆಎನ್‌ಎನ್‌ಸಿ ಕಾರ್ಟ್ ಮೂಲಕ ಕೃಷಿ ಆಧಾರಿತ ನಾವಿನ್ಯ ಚಿಂತನೆಗಳಿಗೆ ಹಾಗೂ ಜೆಎನ್‌ಎನ್‌ಸಿ ಆರ್‌ಐಸಿ ಮೂಲಕ ಸಂಶೋಧನಾ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಈಗಾಗಲೇ ಬಡ್ ಸ್ಕೂಪಿಂಗ್ ಮೆಷಿನ್ ಕುರಿತು ಪೆಟೆಂಡ್ ಫೈಲ್ ಆಗಿದೆ. ಜೊತೆಗೆ ಸರ್ಕಾರದ ಉಪಕರಣ ಮತ್ತು ತರಬೇತಿ ಕೇಂದ್ರದೊಂದಿಗೆ ಒಡಂಬಂಡಿಕೆಯಾಗಿದೆ.

READ | ಕಚೇರಿಯಲ್ಲೇ‌ ಕುಸಿದು ಬಿದ್ದ ವೃದ್ಧೆಯ ಮನೆಗೆ ತೆರಳಿ ಪಿಂಚಣಿ ಮಂಜೂರು ಪತ್ರ ಹಸ್ತಾಂತರ

ಸಿವಿಲ್ ಕನ್ಸಲ್ಟೆನ್ಸಿ
2020 ರಲ್ಲಿ ಪ್ರಾರಂಭಗೊಂಡ ಜೆಎನ್‌.ಎನ್‌.ಎನ್‌.ಸಿ ಸಿವಿಲ್ ಕನ್ಸಲ್ಟೆನ್ಸಿ ಸಾರ್ವಜನಿಕವಾಗಿ ಭೂಮಿಗೆ ಸಂಬಂಧಿತ ಮಣ್ಣು, ರಾಸಾಯನಿಕ ಗುಣಮಟ್ಟ ಪರೀಕ್ಷೆ, ಭೂಮಿ ಸರ್ವೆ ನಡೆಸಿ ಅಧಿಕೃತ ವರದಿ ನೀಡುತ್ತಿದೆ. ನೀರಿನ ಹಲವಾರು ಗುಣವೈಶಿಷ್ಟ್ಯ ಅಳೆಯುವ ಮತ್ತು ಗುಣಮಟ್ಟ ಹೆಚ್ಚಿಸಲು ಪೂರಕವಾಗುವಂತೆ ಹೊಸದಾಗಿ ಬ್ಯಾಕ್ಟಿರಿಯಾಲಾಜಿಕಲ್ ಟೆಸ್ಟ ಮತ್ತು ಹೆವಿ ಮೆಟಲ್ ವಿಶ್ಲೇಷಣೆ ಸಂಶೋಧನಾ ಘಟಕ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಕಡಿಮೆ ದರದ ಸೇವಾ ಶುಲ್ಕದೊಂದಿಗೆ ಈ ಪ್ರಯೋಜನೆ ಪಡೆದುಕೊಳ್ಳಬಹುದಾಗಿದೆ.
ಜೆ.ಎನ್.ಎನ್.ಸಿ.ಇ ಕಾಲೇಜು ಉನ್ನತ ಗುಣಮಟ್ಟದ ಶಿಕ್ಷಣದೊಂದಿಗೆ ಸಾರಿಗೆ, ಹಾಸ್ಟೆಲ್, ಕ್ಯಾಂಟಿನ್ ನಂತಹ ಹಲವಾರು ಸೌಲಭ್ಯಗಳನ್ನು ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಕಾಲೇಜಿನ ಹಾಸ್ಟಲ್ ಅಡಿಗೆ ಮನೆಯನ್ನು ಈಚೆಗೆ ಮೆಲ್ದರ್ಜೆಗೆ ಏರಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗಾಗಿ ಆರೋಗ್ಯ ಸೇವಾ ಕೇಂದ್ರ, ಬ್ಯಾಂಕ್, ಪೋಸ್ಟ್ ಆಫಿಸ್ ಸ್ಥಾಪಿಸಲಾಗಿದೆ. ಕ್ರೀಡೆಯಲ್ಲೂ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಕುಲಸಚಿವ ಪ್ರೊ.ಟಿ.ಎಸ್.ಹೂವಯ್ಯಗೌಡ, ಪ್ರಾಂಶುಪಾಲ ಡಾ.ಕೆ.ನಾಗೇಂದ್ರ ಪ್ರಸಾದ್, ಪ್ರವೇಶಾತಿ ಸಮಿತಿ ಸಂಯೋಜಕ ಡಾ.ಸುರೇಂದ್ರ, ಪಿ.ಆರ್.ಓ ಸಿ.ಎಂ.ನೃಪತುಂಗ ಸೇರಿದಂತೆ ಕಾಲೇಜು ಪ್ರವೇಶಾತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕುವೆಂಪು ವಿವಿಗೆ ಮತ್ತೊಂದು ಗಿಫ್ಟ್ ಕೊಟ್ಟ ಸಿಎಂ, ಶಿವಮೊಗ್ಗಕ್ಕೆ ಬರಲಿದೆ ಸೈನ್ಸ್ ಲ್ಯಾಬ್..

Leave a Reply

Your email address will not be published.