ಬಾಲ್ಯ ವಿವಾಹಕ್ಕೆ ಸಹಕರಿಸಿದ ಪ್ರಿಂಟರ್, ಪೂಜಾರಿ ಆದಿಯಾಗಿ ಎಲ್ಲರ ಮೇಲೂ ಬೀಳಲಿದೆ ಕೇಸ್

DC Office

 

 

ಸುದ್ದಿ ಕಣಜ.ಕಾಂ | DISTRICT | CHILD MARRIAGE 
ಶಿವಮೊಗ್ಗ: ಬಾಲ್ಯ ವಿವಾಹಕ್ಕೆ ಸಹಕರಿಸಿದ ಎಲ್ಲರ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ ಮಾಡುವ ಕಲ್ಯಾಣ ಮಂದಿರ, ದೇವಸ್ಥಾನ, ಮದುವೆ ಮಾಡಿಸುವ ಪೂಜಾರಿಗಳು, ಆಮಂತ್ರಣ ಮುದ್ರಿಸುವ ಪ್ರಿಂಟರ್ ಸೇರಿದಂತೆ ಬಾಲ್ಯವಿವಾಹಕ್ಕೆ ಸಹಕರಿಸುವವರೆಲ್ಲರ ವಿರುದ್ಧ ಮುಲಾಜಿಲ್ಲದೇ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು ಅನೇಕ ರೀತಿಯಲ್ಲಿ ಅರಿವು ಮೂಡಿಸಲಾಗುತ್ತಿದ್ದರೂ, ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಯವರು ಇಂತಹ ಮದುವೆಗೆ ಸಹಕರಿಸಿದವರೆಲ್ಲರ ವಿರುದ್ದ ಪ್ರಕರಣ ದಾಖಲಿಸಬೇಕೆಂದು ನಿರ್ದೇಶಿಸಿದರು.

READ | ಗಾಢ ನಿದ್ರೆಯಲ್ಲಿದ್ದವರಿಗೆ ಮಳೆ ಶಾಕ್, ಮಕ್ಕಳ ಪುಸ್ತಕ, ಎಲೆಕ್ಟ್ರಾನಿಕ್ಸ್ ವಸ್ತುಗಳು, ತೋಯ್ದು ತೊಪ್ಪೆ! 

ಡಿಡಿಪಿಐ, ಡಿಡಿಪಿಯುಗೆ ಜವಾಬ್ದಾರಿ
ಬಾಲ್ಯವಿವಾಹವನ್ನು ತಗ್ಗಿಸಲು ಡಿಡಿಪಿಯು ಮತ್ತು ಡಿಡಿಪಿಐ ರವರು ಶಾಲಾ-ಕಾಲೇಜು ಮುಖ್ಯೋಪ್ಯಾಧ್ಯಾಯರನ್ನು ಕರೆಯಿಸಿ, ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ಸಭೆ ನಡೆಸಿ, ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸುವ ಬಗ್ಗೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲು ಸೂಚಿಸಿದ ಅವರು ಪಿಯುಸಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಆಗಸ್ಚಟ್ 15ರೊಳಗೆ ದತ್ತು ಕೇಂದ್ರ ಆರಂಭಿಸಿ
ದತ್ತು ಕೇಂದ್ರಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ಕೂಡಲೇ ನಿಯೋಜಿಸಲು ಕ್ರಮ ವಹಿಸಿ, ಆಗಸ್ಟ್ 15 ರೊಳಗೆ ಕೇಂದ್ರವನ್ನು ಆರಂಭಿಸಬೇಕು. ಬಾಲಕಿಯರ ಬಾಲ ಮಂದಿರದ ಸ್ಥಿತಿ ಉತ್ತಮವಾಗಿಲ್ಲ. ಸೂಕ್ತವಾದ ಕಟ್ಟಡವನ್ನು ಹುಡುಕಿ ಸುಧಾರಣೆಗೆ ಕ್ರಮ ವಹಿಸಬೇಕು. ವಿಶೇಷ ಪಾಲನಾ ಯೋಜನೆ, ಪೋಷಕತ್ವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಬಾಲನ್ಯಾಯ ಮಂಡಳಿ ಮುಂದೆ ಬಂದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ, ಪುನರ್ವಸತಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಸ್ವಾಧಾರ ಗೃಹಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಬೇಕು. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ತ್ವರಿತ ವಿಲೇವಾರಿ ಮಾಡಿ ಸೂಕ್ತ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿ.ಎಚ್.ಓ ಡಾ. ರಾಜೇಶ್ ಸುರಗಿಹಳ್ಳಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಡಿಪಿಓಗಳು, ಇಓಗಳು ಹಾಜರಿದ್ದರು.

https://suddikanaja.com/2022/01/21/footpath-clearance-operation-by-police-department-at-bh-road-on-friday-strict-instructions-to-shop-owners/

Leave a Reply

Your email address will not be published. Required fields are marked *

error: Content is protected !!