Crime news | ಗೃಹಿಣಿ ಅನುಮಾನಾಸ್ಪದ ಸಾವು, ಶವವಿಟ್ಟು ಪ್ರತಿಭಟಿಸಿದ ಕುಟುಂಬ, ಮುಂದೇನಾಯ್ತು? | ದಾರಿಹೋಕನಿಗೆ ಗುದ್ದಿದ ವಾಹನ ಸ್ಥಳದಲ್ಲೇ ಸಾವು

Crime news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯ ಶವವು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯ ಬೆನ್ನಲ್ಲೇ ಕುಟುಂಬದ ಸದಸ್ಯರು ಶವ ಇಟ್ಟು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Crime logo

READ | ಶಿವಮೊಗ್ಗದಲ್ಲಿ ಸೆಲ್ಫಿ‌ ದುರಂತ, ಪ್ರಾಣ ಕಳೆದುಕೊಂಡ ಯುವಕ, ಎಲ್ಲಿ ನಡೀತು ಘಟನೆ?

ಗೋಪಾಳದ ಅಶ್ವಿನಿ (30) ಮೃತ ಗೃಹಿಣಿ. ಈಕೆ ಶುಕ್ರವಾರ ರಾತ್ರಿ ಗಂಡನ ಮನೆಯಲ್ಲಿ‌ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಬಗ್ಗೆ ತಿಳಿದುಬಂದಿದೆ.
ಅಶ್ವಿನಿ ವಿವಾಹವಾಗಿ ಐದು ವರ್ಷಗಳಾಗಿದ್ದು, ಕುಟುಂಬದಲ್ಲಿ‌ ವರದಕ್ಷಿಣೆಗಾಗಿ ಕಿರುಕುಳ‌ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರು ನೀಡಿದ ಬೆನ್ನಲ್ಲೇ ಅಶ್ವಿನಿಯ ಪತಿ ಅಭಿಲಾಶ್ ಮತ್ತು ಆಕೆಯ ಮಾವ ನಾಗರಾಜ್ ಎಂಬುವವರನ್ನು ಬಂಧಿಸಲಾಗಿದೆ.
ತಡರಾತ್ರಿವರೆಗೆ ಮುಂದುವರಿದ ಪ್ರತಿಭಟನೆ
ಅಶ್ವಿನಿಯ ಶವವಿಟ್ಟುಕೊಂಡು ಆಕೆಯ ಮನೆಯವರು ಶನಿವಾರ ತಡರಾತ್ರಿವರೆಗೆ ಪ್ರತಿಭಟನೆ ಮಾಡಿದ್ದಾರೆಂದು ತಿಳಿದುಬಂದಿದೆ. ಅಶ್ವಿನಿಯ ಅತ್ತೆಯನ್ನೂ ಬಂಧಿಸುವಂತೆ ಆಗ್ರಹಿಸಲಾಗಿದೆ.‌ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು

SHIMOGA: ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮದ ಬಳಿ ಮಾ.29 ರಂದು ಬೆಳಗಿನ ಜಾವ 4 ಗಂಟೆ ವೇಳೆಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪಘಾತಕ್ಕೀಡಾದ ಪುರುಷನ ಶವ ಪತ್ತೆಯಾಗಿದೆ.
ಮೃತನ ವಾರಸುದಾರರು ಪತ್ತೆಯಾಗಿರುವುದಿಲ್ಲ. ಅಪಘಾತದ ಸ್ಥಳದಲ್ಲಿ ಬಿಳಿ ಬಣ್ಣದ ಮಾರುತಿ ಓಮ್ನಿ ವ್ಯಾನ್ ಪತ್ತೆಯಾಗಿದೆ. ಎಚ್.ಕೆ ಜಂಕ್ಷನ್ ಕಡೆಯಿಂದ ಬೆಳಗಿನ ಜಾವ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಈ ಬಿಳಿ ಮಾರುತಿ ಓಮ್ನಿ ವಾಹನ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಅಪಘಾತ ಮಾಡಿ, ವಾಹನ ಮುಂದೆ ಹೋಗಲು ಸಾಧ್ಯವಾಗದೇ ಸ್ಥಳದಲ್ಲೇ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.
ವಾರಸುದಾರರಿದ್ದರೆ ಕರೆ ಮಾಡಿ
ಮೃತ ವ್ಯಕ್ತಿಯ ಚಹರೆ ಸಾಧಾರಣ ಮೈಕಟ್ಟು. ಎಣ್ಣೆಗೆಂಪು ಮೈಬಣ್ಣ ಕೋಲುಮುಖ, ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾನೆ. ಮೃತನ ಮೈಮೇಲೆ ನೀಲಿ ಬಣ್ಣದ ಟೀ ಶರ್ಟ್, ಮಾಸಲು ಬಣ್ಣದ ಬನಿಯನ್, ಮಿಲಿಟರಿ ಖಾಕಿ ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಗುರುತು ಬಲ್ಲವರು ಪೊಲೀಸ್ ಕಂಟ್ರೋಲ್ ರೂಂ ನಂ.100 ಅಥವಾ ಭದ್ರಾವತಿ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಬ್ ಇನ್ಸ್ ಪೆಕ್ಟರ್ (9480803357) ಅಥವಾ 08282 270100 ಗೆ ಸಂಪರ್ಕಿಸುವಂತೆ ಭದ್ರಾವತಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!