ಸುದ್ದಿ ಕಣಜ.ಕಾಂ ಬೆಂಗಳೂರು
BANGALURU (VIDHAN SOUDHA): ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟದಿಂದಾಗಿ ಸಾಕಷ್ಟು ಮನೆಗಳ ಕುಸಿತ, ಆಸ್ತಿ- ಪಾಸ್ತಿ, ಬೆಳೆ ಹಾನಿ ಸಂಭವಿಸಿದ್ದು, ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ತಕ್ಷಣವೇ ಸರ್ಕಾರ ತಜ್ಞರು ಹಾಗೂ ಅಧಿಕಾರಿಗಳನ್ನೊಳಗೊಡ ಟಾಸ್ಕ್ ಪೋರ್ಸ್ (Task force) ರಚನೆ ಮಾಡಿ, ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ (special package) ಬಿಡುಗಡೆ ಮಾಡುವಂತೆ ಶಾಸಕ ಡಾ.ಧನಂಜಯ ಸರ್ಜಿ (Dr.Dhananjay sarji) ಅವರು ಸರ್ಕಾರವನ್ನು ಒತ್ತಾಯಿಸಿದರು.
READ | ಭೀಕರ ರಸ್ತೆ ಅಪಘಾತ, ಕ್ರೈಸ್ತ ಧರ್ಮಗುರು ಸಾವು
ಮಂಗಳವಾರ ವಿಧಾನ ಪರಿಷತ್ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಮನೆ, ಆಸ್ತಿ, ಪಾಸ್ತಿ, ಬೆಳೆ ಹಾನಿ ಸಂಭವಿಸಿದೆ. ಪ್ರಸ್ತುತ ಅಕ್ಷರಶಃ ಮಳೆನಾಡಾಗಿದೆ. ಪ್ರವಾಹ ಭೀತಿಯಲ್ಲಿ ಬದುಕುವಂತಾಗಿದೆ ಎಂದು ಅತಿವೃಷ್ಟಿಯಲ್ಲಿ ಅನಾಹುತಗಳನ್ನು ಸದನದಲ್ಲಿ ಪ್ರಸ್ತಾಪಿಸಿದರು.
ಕಳೆದೊಂದು ವಾರದಿಂದ ಸೂರ್ಯನ ಬೆಳಕನ್ನು ಕಾಣದ ಸ್ಥಿತಿ ನಿರ್ಮಾಣಗೊಂಡಿದೆ, ಮಲೆನಾಡಿನ ಭತ್ತದ ಗದ್ದೆಗಳು ಜಲಾವೃತಗೊಂಡಿವೆ, ನದಿ, ಝರಿ- ತೊರೆ, ಹಳ್ಳ-ಕೊಳ್ಳಗಳು ಉಕ್ಕಿ ಅಡಕೆ ತೋಟಗಳು ಜಲಾವೃತಗೊಂಡಿವೆ ಎಂದು ಸಭೆಯ ಗಮನಕ್ಕೆ ತಂದರು.
ಬಾಳೆಹೊನ್ನೂರು ಕರಿಯಮ್ಮನ ಬೀದಿಯಲ್ಲಿ ಮನೆ ಕುಸಿದಿದ್ದು, ಮನೆಯಲ್ಲಿ ವಸ್ತುಗಳೆಲ್ಲಾ ಮಣ್ಣಿನಲ್ಲಿ ಕೊಚ್ಚಿ ಹೋಗಿವೆ, ಇದೇ ರೀತಿ ವಿವಿಧ ಜಿಲ್ಲೆಗಳಲ್ಲಿ ನೂರಾರು ಮನೆಗಳು ಗೋಡೆ ಕುಸಿತ ಉಂಟಾಗಿ ಹಾನಿಗೊಳಗಾಗಿವೆ. ಉಡುಪಿ ಜಿಲ್ಲೆಯಲ್ಲಿ 9 ಮನೆಗಳು ಸಂಪೂರ್ಣ ಕುಸಿದಿದ್ದು, 500 ಕ್ಕೂ ಹೆಚ್ಚು ಮನೆಗಳು ಭಾಗಶಃ ನಾಶವಾಗಿವೆ. ಸಮುದ್ರ ತೀರದ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿ ಜನ-, ಜಾನುವಾರು ಸೇರಿದಂತೆ ಕೋಟ್ಯಂತರ ರೂ.ಗಳ ಆಸ್ತಿ ಪಾಸ್ತಿ ಹಾನಿಗೊಂಡಿದೆ ಎಂದು ವಿವರಿಸಿದರು.
ಕಳೆದೊಂದು ತಿಂಗಳಿಂದ ಅತಿವೃಷ್ಟಿಯಿಂದ ಹಾನಿ ಸಂಭವಿಸಿದ್ದರೂ ಪ್ರವಾಹದ ನಿರ್ವಹಣೆ ಮಾತ್ರ ನಿರೀಕ್ಷೆಗೆ ತಕ್ಕಂತೆ ಆಗಿಲ್ಲ, ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಸಚಿವರ ಕಾಟಾಚಾರಕ್ಕೆ ಅಲ್ಲೊಂದು ಇಲ್ಲೊಂದು ಭೇಟಿ ನೀಡಿದ್ದು ಬಿಟ್ಟರೆ ಯಾವುದೇ ರಚನಾತ್ಮಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಸರ್ಕಾರ ಕೂಡಲೇ ಉನ್ನತ ಅಧಿಕಾರಿಗಳ ಹಾಗೂ ತಜ್ಞರ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಬೇಕು. ತುರ್ತಾಗಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ವಿಶೇಷ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.