Red alert | ಶಿವಮೊಗ್ಗದಲ್ಲಿ ಇಂದು ರೆಡ್ ಅಲರ್ಟ್, ಎಲ್ಲಿ ಎಷ್ಟು ಮಳೆ? ಏನೇನು ಹಾನಿ?

shivamogga rain 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜು.18ರಂದು ಶಿವಮೊಗ್ಗ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ನಾಳೆಯಿಂದ
21ರವರೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಶಿವಮೊಗ್ಗದ ಹೊಸನಗರ, ತೀರ್ಥಹಳ್ಳಿ ಮತ್ತು‌ ಸಾಗರದಲ್ಲಿ ಮಂಗಳವಾರವೂ ಭಾರಿ ಮಳೆಯಾಗಿದ್ದು, ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದಲ್ಲಿ ಗುರುವಾರ ಬೆಳಗಿನ ಜಾವದಿಂದ ಮಳೆ ನಿರಂತರ ಸುರಿಯುತ್ತಿದೆ.
ಎಲ್ಲೆಲ್ಲಿ‌ ಎಷ್ಟು ಮಳೆ?
ಆಗುಂಬೆಯಲ್ಲಿ ಬುಧವಾರ ಅತ್ಯಧಿಕ 220 ಎಂಎಂ ಮಳೆ ಸುರಿದಿದೆ. ಜಿಲ್ಲೆಯಲ್ಲಿ 47.3 ಎಂಎಂ ಮಳೆಯಾಗಿದೆ. ಹೊಸನಗರದಲ್ಲಿ 66.7 ಎಂಎಂ, ಸಾಗರ 64.2, ತೀರ್ಥಹಳ್ಳಿ 80.0, ಭದ್ರಾವತಿ 16.6, ಶಿಕಾರಿಪುರ 16.8, ಸೊರಬ 28.3, ಶಿವಮೊಗ್ಗ 18.4 ಎಂಎಂ‌ ಮಳೆಯಾಗಿದೆ.

READ | ಶಿವಮೊಗ್ಗ ಜಿಲ್ಲೆಯ ಎಲ್ಲ‌ ಶಾಲಾ, ಕಾಲೇಜುಗಳಿಗೆ ಇಂದು ರಜೆ, ಡಿಸಿ ಹೇಳಿದ್ದೇನು?

ಎಲ್ಲಿ ಏನಾಗಿದೆ?

  • ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರವಾಹ‌ ಮುಂದುವರಿದಿದೆ. ತುಂಗಾ, ಮಾಲತಿ, ಕುಶಾವತಿ ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿವೆ. ಮಾಲತಿ ನದಿಯಲ್ಲಿನ ಪ್ರವಾಹದಿಂದ ನಾಬಳ ಸೇತುವೆ ಮೇಲೆ ನೀರು ನಿಂತಿದೆ. ಎರಡನೇ ದಿನವೂ ಗುಡ್ಡೇಕೇರಿ- ಬಿದರಗೋಡು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
  • ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಹೊಸನಗರದ ಮೂಲೆಗದ್ದೆ ಸಮೀಪ ಬೃಹತ್ ಮರ ಬಿದ್ದಿದ್ದರಿಂದ ತೊಂದರೆ ಆಗಿತ್ತು.
  • ಹೊಸನಗರದ ಕೋಡೂರು ಸಮೀಪದ ಕುಸುಗುಂಡಿಯಲ್ಲಿ ನೀರಾವರಿ ಚಾನಲ್ ದಂಡೆ ಒಡೆದು ಕೃಷಿ ಜಮೀನಿಗೆ ನೀರು‌ ನುಗ್ಗಿದೆ. ಚಕ್ರಾ‌ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
  • ವರದಾ ಮತ್ತು‌ ದಂಡಾವತಿ ನದಿಗಳು ಮೈದುಂಬಿ‌ ಹರಿಯುತ್ತಿದ್ದು, ವರದಾ ನದಿ ಪಾತ್ರದ ಕಡಸೂರು, ಅಬಸಿ, ಗುಂಜನೂರು, ತಟ್ಟಿಕೆರೆ, ಕಾರೆ ಹೊಂಡ ಮತ್ತಿತರ ಗ್ರಾಮಗಳಲ್ಲಿ ಅಡಕೆ ತೋಟ ಜಲಾವೃತಗೊಂಡಿವೆ.
  • ಕಸಬಾ ಹೋಬಳಿ ಕೊಡಕಣಿ ಗ್ರಾಮದಲ್ಲಿ ಗೀತಾ ಎಂಬುವವರು ಕಟ್ಟಿಗೆ ಮನೆ ಬಿದ್ದಿದೆ. ಉಳವಿ‌ ಹೋಬಳಿಯ ಎನ್.ದೊಡ್ಡೇರಿ ಗ್ರಾಮದ ನಾಗಪ್ಪ ಅವರ ಮನೆ ಮೇಲೆ‌ ಮರ ಬಿದ್ದಿದೆ. ಚಂದ್ರಗುತ್ತಿ‌ ಹೋಬಳಿಯ ಕಮರೂರು ಭದ್ರಾಪುರ ಗ್ರಾಮದ ಭದ್ರಮ್ಮ, ಜೋಳದಗುಡ್ಡೆಯ ಬಸಮ್ಮ ಎಂಬುವವರ ಮನೆ ಕುಸಿದಿದೆ. ಯಲವಾಟ ಗ್ರಾಮದ ಬಸವರಾಜಪ್ಪ ಗೌಡರ ಕೊಟ್ಟಿಗೆ ಮನೆಯ ಗೋಡೆ ಕುಸಿದು ಬಿದ್ದಿದೆ.

error: Content is protected !!