ಹಬ್ಬಕ್ಕೆ ಬಂದವಳು, ಹಬ್ಬದ ದಿನವೇ ಹೆಣವಾಗಿ ಸಿಕ್ಕಳು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೀಪಾವಳಿ ಹಬ್ಬ ತಮ್ಮೂರಲ್ಲಿಯೇ ಆಚರಿಸಿಕೊಳ್ಳಬೇಕೆಂದು ಶಿವಮೊಗ್ಗಕ್ಕೆ ಬರುತ್ತಿದ್ದ ಯುವತಿ ತುಂಗೆಯಲ್ಲಿ ಹೆಣವಾಗಿ ಸಿಕ್ಕಿದ್ದಾಳೆ.
ಗುರುವಾರ ರಾತ್ರಿ 9.30ರ ಸುಮಾರಿಗೆ ಜನ್ ಶತಾಬ್ದಿ ರೈಲಿನಿಂದ ಆಯತಪ್ಪಿ ತುಂಗಾ ನದಿಗೆ ಬಿದ್ದಿದ್ದ ಯುವತಿಗಾಗಿ ಅಗ್ನಿಶಾಮಕ ದಳದ ಕಳೆದ ಎರಡು ದಿನಗಳಿಂದ ನಿರಂತರ ಶೋಧ ಕಾರ್ಯ ಮಾಡಿದೆ. ಅದರ ಫಲವಾಗಿ ಶನಿವಾರ ಬೆಳಗ್ಗೆ ಯುವತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಯಾರು ಈ ಯುವತಿ: ಗಾಡಿಕೊಪ್ಪ ನಿವಾಸಿ ಸಹನಾ (24) ಎಂಬಾಕೆಯೇ ಶವವಾಗಿ ಸಿಕ್ಕಿದ್ದು. ತನ್ನ ತಾಯಿಯೊಂದಿಗೆ ಬೆಂಗಳೂರಿನ ಸಂಪಿಗೆಯಲ್ಲಿ ಓದುವುದಕ್ಕಾಗಿ ಉಳಿದುಕೊಂಡಿದ್ದರು. ನವೆಂಬರ್ 22ರಂದು ಎಂಸಿಎ ಪರೀಕ್ಷೆ ಹಾಗೂ ದೀಪಾವಳಿ ಹಬ್ಬ ಇದ್ದುದ್ದರಿಂದ ತಾಯಿಯೊಂದಿಗೆ ಜನ್ ಶತಾಬ್ದಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದರು. ಇನ್ನೇನು ಕೆಲ ಹೊತ್ತು ಕಳೆದಿದ್ದರೆ ಶಿವಮೊಗ್ಗ ರೈಲು ನಿಲ್ದಾಣಕ್ಕೆ ತಲುಪುತ್ತಿದ್ದರು. ಆದರೆ, ಫ್ರೆಶ್ ಆಗುವುದಕ್ಕಾಗಿ ಬಾತ್ ರೂಂಗೆ ಹೋಗಿ ಬರುವಾಗ ಆಯತಪ್ಪಿ ಯುವತಿ ತುಂಗಾ ನದಿಗೆ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಅವಿರತ ಶ್ರಮ: ಗುರುವಾರ ರಾತ್ರಿ ಯುವತಿ ನದಿಗೆ ಬಿದ್ದ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಗ್ನಿಶಾಮಕದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಅಂದು ಮಧ್ಯ ರಾತ್ರಿ 2ರ ವರೆಗೆ ಶೋಧ ಕಾರ್ಯ ನಡೆಸಿದರೂ ಪ್ರಯೋಜನ ಆಗಿಲ್ಲ. ಬಳಿಕ ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್. ಅಶೋಕ್ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ 10-12 ಜನರ ಎರಡು ತಂಡ ನಿರಂತರ ಕಾರ್ಯಾಚರಣೆ ನಡೆಸಿದೆ.
ಯುವತಿಯ ಶವವನ್ನು ಮೀನುಗಳು ತಿಂದಿದ್ದು, ದೇಹದ ಹಲವೆಡೆ ಗಾಯಗಳಾಗಿವೆ ಎಂದು ಅಧಿಕಾರಿಗಳು `ಸುದ್ದಿ ಕಣಜ.ಕಾಂ’,ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!