ವಾರಸುದಾರರ ಮನೆ ಸೇರಿದ ಕೋಟಿಗಟ್ಟಲೇ ಮೌಲ್ಯದ ವಸ್ತುಗಳು, ಪೊಲೀಸರ ಕಾರ್ಯಕ್ಕೆ ಶ್ಲಾಘನೆ

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಜಿಲ್ಲೆಯಲ್ಲಿ 2021ನೇ ಸಾಲಿನಲ್ಲಿ 231 ಸ್ವತ್ತು ಕಳವು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

follow us in link treeದಾಖಲಾಗಿದ್ದ ಒಟ್ಟು 518 ಸ್ವತ್ತು ಕಳವು ಪ್ರಕರಣಗಳಲ್ಲಿ 231 ಅನ್ನು ಪತ್ತೆ ಹಚ್ಚಿ ಆರೋಪಿಗಳಿಂದ ಜಪ್ತಿ ಮಾಡಿಕೊಂಡಿರುವ ಸಾಮಗ್ರಿಗಳನ್ನು ವಾರಸುದಾರರಿಗೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ತಿಳಿಸಿದರು.
ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪತ್ತೆಯಾದ ಸಾಮಗ್ರಿಗಳನ್ನು ವಾರಸುದಾರರಿಗೆ ಬಿಟ್ಟುಕೊಡುವ ಕವಾಯತು(ಪಾಪರ್ಟಿ ರಿಟರ್ನ್ ಪರೇಡ್) ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

₹ 3.03 ಕೋಟಿ ಮೌಲ್ಯದ ಸಾಮಗ್ರಿ ಜಪ್ತಿ

ಒಟ್ಟು 518 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಆರು ದರೋಡೆ, 54 ಸುಲಿಗೆ, 151 ಕನ್ನ ಕಳವು ಪ್ರಕರಣಗಳು ಇವೆ. ಸದರಿ ಪ್ರಕರಣಗಳಲ್ಲಿ ಅಂದಾಜು ₹ 6,23,91,247 ಮೌಲ್ಯದ ಸ್ವತ್ತು ಕಳವು ಮಾಡಲಾಗಿದೆ. ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿರಂತರ ಕಾರ್ಯಾಚರಣೆ ನಂತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಏನೇನು ವಶಕ್ಕೆ ಪಡೆಯಲಾಗಿದೆ?
231 ಪ್ರಕರಣಗಳನ್ನು ಪತ್ತೆ ಹಚ್ಚಿದ್ದುಅಂದಾಜು ₹  1,22,10,959 ಮೌಲ್ಯದ 2 ಕೆಜಿ 897 ಗ್ರಾಂ ತೂಕದ ಬಂಗಾರ ಆಭರಣಗಳು, ಅಂದಾಜು ₹  9,52,549 ಮೌಲ್ಯದ ಒಟ್ಟು 14 ಕೆಜಿ 394 ಗ್ರಾಂ ತೂಕದ ಬೆಳ್ಳಿ ಆಭರಣ, ಅಂದಾಜು ₹ 55,88,949 ಮೌಲ್ಯದ ಒಟ್ಟು 73 ವಾಹನ, ₹ 3,00925 ಮೌಲ್ಯದ 27 ಮೊಬೈಲ್, ₹ 35,40,102 ನಗದು, 6 ಜಾನುವಾರು/ ಕುರಿಗಳು, ₹ 15,16,400 ಮೌಲ್ಯದ 39 ಕ್ವಿಂಟಾಲ್ ತೂಕದ ಅಡಿಕೆ, ₹ 4,38,796 ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ₹ 60,29,036 ಮೌಲ್ಯದ ಇತರೆ ಸಾಮಗ್ರಿಗಳನ್ನು ಸೇರಿ ಒಟ್ಟು ₹ 3,03,59,716 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್.ಪಿ ಡಾ.ಎಚ್.ಟಿ.ಶೇಖರ್, ಜಿಲ್ಲೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು, ವಾರಸುದಾರರು ಉಪಸ್ಥಿತರಿದ್ದರು.

https://www.suddikanaja.com/2021/08/24/two-accused-arrested-3/

error: Content is protected !!