ಶಿವಮೊಗ್ಗದ ಈ ಕುಗ್ರಾಮದಲ್ಲಿ ಮೂರು ಸರ್ಕಾರಿ ಶಾಲೆಗಳಿಗೆ ಬೀಗ

 

 

ಸುದ್ದಿ ಕಣಜ.ಕಾಂ | DISTRICT | SPECIAL REPORT
ಸಾಗರ: ತಾಲೂಕಿನ ಕರೂರು ಹೋಬಳಿಯಲ್ಲಿನ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ಕಾಡುತ್ತಿದೆ. ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಕರೂರು ಹೋಬಳಿಯಲ್ಲಿನ 48 ಶಾಲೆಗಳಲ್ಲಿ ಈಗಾಗಲೇ 3 ಶಾಲೆಗಳು ಮುಚ್ಚಿದ್ದು, ಉಳಿದ 45 ಶಾಲೆಗಳಿಗೆ 51 ಶಿಕ್ಷಕರಿದ್ದು ಶಿಕ್ಷಣ ಬೋಧನೆ ಸಮರ್ಪಕವಾಗಿ ನೀಡಲಾಗದೆ ಶಿಕ್ಷಕರು ಹೈರಾಣಾಗಿದ್ದಾರೆ.

ಇರುವ ಶಿಕ್ಷಕರಿಗೆ ಬೋಧನೆಯೊಂದಿಗೆ ಕಚೇರಿ ಕೆಲಸ, ಚುನಾವಣೆ ಕರ್ತವ್ಯ, ಮಧ್ಯಾಹ್ನ ಬಿಸಿಯೂಟದ ನಿರ್ವಹಣೆ ಇನ್ನಿತರ ಹೆಚ್ಚುವರಿ ಹೊರೆಗಳನ್ನು ವಿಧಿಸಲಾಗಿದೆ. ಹೀಗಾಗಿ, ಪಠ್ಯ ಮುಗಿಸಲು ಸಾಧ್ಯವಾಗುತ್ತಿಲ್ಲ.

ಒಂದು ವರ್ಷಗಳಿಂದ ಬೇಡಿಕೆ ಈಡೇರಿಲ್ಲ
ಈ ಭಾಗಕ್ಕೆ ಅಗತ್ಯ ಶಿಕ್ಷಕರನ್ನು ಒದಗಿಸುವಂತೆ ಕಳೆದೊಂದು ವರ್ಷದಿಂದ ಈ ಭಾಗದ ಶಾಲಾಭಿವೃದ್ಧಿ ಸಮಿತಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಹಲವು ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲು ಹಿಂಜರಿಯುತ್ತಿದ್ದಾರೆ. ಉಳ್ಳವರು ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ.

ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಈ ಭಾಗಕ್ಕೆ ಅಗತ್ಯ ಅತಿಥಿ ಶಿಕ್ಷಕರನ್ನು ಈ ಭಾಗಕ್ಕೆ ನೀಡಲಾಗಿದೆ.
ಕೆ.ಬಿಂಬ, ಕ್ಷೇತ್ರ ಶಿಕ್ಷಣಾಧಿಕಾರಿ, ಸಾಗರ

ಒಂದು ವರ್ಷದಿಂದ ಈ ಬಗ್ಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಅವ್ಯವಸ್ಥೆ ವಿರುದ್ಧ ಜನವರಿ 26ರಂದು ಪ್ರತಿಭಟನೆ ನಡೆಸಲಾಗುವುದು.
ರಾಮಚಂದ್ರ ಹಾಬಿಗೆ, ಗ್ರಾಮ ಪಂಚಾಯಿತಿ ಸದಸ್ಯ

ಶಿಕ್ಷಕರ ಕೊರತೆ ನೀಗಿಸುವಂತೆ ಇದೇ ತಿಂಗಳ ಜನವರಿ 14ರಂದು ಜನಪ್ರತಿನಿಧಿಗಳ ನಿಯೋಗ ಡಿಡಿಪಿಐ ಮನವಿ ಕೂಡ ಸಲ್ಲಿಸಿದೆ. ಜನವರಿ 20ರ ಗಡುವು ಕೂಡ ನೀಡಿದ್ದರೂ ಅದು ಪೂರ್ಣಗೊಂಡಿದೆ. ಆದರೂ ಶಿಕ್ಷಕರನ್ನು ನೀಡಿಲ್ಲ.

26ರಂದು ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ

ಇತ್ತೀಚೆಗೆ ನಡೆದ ಸಭೆಯಲ್ಲಿ ಜನವರಿ 26ರಂದು ಈ ಭಾಗದ ಎಲ್ಲ ಶಾಲೆಗಳನ್ನು ಬಂದ್ ಮಾಡಿ ಸುಮಾರು 70ಕ್ಕೂ ಅಧಿಕ ಮಹಿಳಾ ಹಾಗೂ ಸ್ವಸಹಾಯ ಸಂಘಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ ಮಾಜಿ ಕೆಡಿಪಿ ಸದಸ್ಯ ದೇವರಾಜ್ ಕಪ್ಪದೂರು ಎಸ್ ಎಸ್ ಭೋಗ್ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ಹಾಬಿಗೆ, ಅಧ್ಯಕ್ಷ ಕೆ.ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಘುಪತಿ ನೇರಿಗೆ ಉಪಸ್ಥಿತರಿದ್ದರು.
– ವರದಿ | ಎಂ.ಸುಕುಮಾರ್

error: Content is protected !!