ಲೋಕಲ್ ಫೈಟ್’ಗೆ ಅಖಾಡ ಸಿದ್ಧ: ಗುತ್ತಿಗೆದಾರರಿಗೆ ಷರತ್ತು ಅನ್ವಯ, ಆಯೋಗದ ನಿಯಮಗಳೇನು?

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಉಚ್ಚ ನ್ಯಾಯಾಲಯ ನಿರ್ದೇಶನದನ್ವಯ ಚುನಾವಣೆ ಆಯೋಗ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸಲು ಮುಂದಾಗಿದೆ. ಈ ಸಂಬಂಧ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿದ್ದು, ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಪಂ ಚುನಾವಣೆ ನಡೆಯಲಿದ್ದು, ಸಾಕಷ್ಟು ಕಠಿಣ ಷರತ್ತುಗಳನ್ನು ವಿಧಿಸಿದೆ. ಬಹುಮುಖ್ಯವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ಆ ಗ್ರಾಪಂನಲ್ಲಿ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಚುನಾವಣೆಗೆ ಸ್ಪರ್ಧಿಸುವ ಸಾಮಾನ್ಯ ವರ್ಗದವರಿಗೆ 200 ರೂ. ಮತ್ತು ಎಸ್.ಸಿ, ಎಸ್.ಟಿ., ಒಬಿಸಿಯವರಿಗೆ 100 ರೂ. ಠೇವಣಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಚಿಹ್ನೆ ಆಯ್ಕೆ, ಪ್ರಚಾರ, ಸೂಚಕರ ಆಯ್ಕೆ ಇತ್ಯಾದಿ ಅಂಶಗಳ ಬಗ್ಗೆ ಸಾಕಷ್ಟು ನಿಯಮಗಳನ್ನು ವಿಧಿಸಿದೆ.
ನಿಯಮಗಳೇನು?
* ಒಂದೇ ಚಿಹ್ನೆ ಒಬ್ಬ ಅಭ್ಯರ್ಥಿಗಿಂತ ಹೆಚ್ಚಿನ ಅಭ್ಯರ್ಥಿಗಳು ಕೋರಿದ್ದಲ್ಲಿ ಚೀಟಿ ಎತ್ತುವ ಮೂಲಕ ಹಂಚಿಕೆ ಮಾಡಬೇಕು. ಯಾವುದೇ ರಾಜಕೀಯ ಪಕ್ಷದ ಚಿಹ್ನೆ ನೀಡುವಂತಿಲ್ಲ.
* ಮತ ಗಳಿಕೆಗಾಗಿ ದೇವಸ್ಥಾನ, ಚರ್ಚ್, ಮಸೀದಿ ಅಥವಾ ಇತರೆ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರದ ವೇದಿಕೆಯಾಗಿ ಬಳಸುವಂತಿಲ್ಲ.
* ದ್ವೇಷ ಹುಟ್ಟಿಸುವ, ಕೆರಳಿಸುವ ಯಾವುದೇ ಚಟುವಟಿಕೆ ಮಾಡುವಂತಿಲ್ಲ.
* ಬೇರೆ ಅಭ್ಯರ್ಥಿಯ ನಡತೆ, ಶೀಲಗಳ ಬಗ್ಗೆ ಸುದ್ದಿ ಪ್ರಚಾರ ಮಾಡುವಂತಿಲ್ಲ.
* ಒಂದೇ ಹೆಸರಿನ ಇಬ್ಬರು ಅದಕ್ಕಿಂತ ಅಧಿಕ ಅಭ್ಯರ್ಥಿಗಳಿದ್ದಲ್ಲಿ ಅವರೊಂದಿಗೆ ಚರ್ಚಿಸಿ, ಅಗತ್ಯ ಬದಲಾವಣೆಗೆ ಸೂಚಿಸಬೇಕು. (ಉದಾ: ಹೆಸರಿನೊಂದಿಗೆ ಅಲಿಯಾಸ್ ಬೇರೊಂದು ಹೆಸರು. ತಂದೆಯ ಹೆಸರು, ವೃತ್ತಿಯನ್ನೂ ಬಳಸಬಹುದು)
* ಗುತ್ತಿಗೆದಾರರು ಪ್ರಸಕ್ತ ಗ್ರಾಮ ಪಂಚಾಯಿತಿಯ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಲ್ಲಿ ಅಂತಹವರು ಆ ಗ್ರಾಪಂನಲ್ಲಿ ಸ್ಪರ್ಧಿಸುವಂತಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ಸೇವೆಯಿಂದ ವಜಾಗೊಂಡವರು, ಗ್ರಾಪಂಗೆ ಯಾವುದಾದರೂ ಬಾಕಿ ಬರಬೇಕಿದ್ದಲ್ಲಿ ಅಂತಹವರು ಸ್ಪರ್ಧಿಸುವಂತಿಲ್ಲ.
* 1000ಕ್ಕಿಂತ ಹೆಚ್ಚು ಮತದಾರರಿದ್ದು, ಆಕ್ಸಿಲರಿ ಮತಗಟ್ಟೆ ಸ್ಥಾಪಿಸಲು ಸಾಧ್ಯವಾಗದಿದ್ದಲ್ಲಿ ಮೂಲ ಮತದಾನ ಕೇಂದ್ರಕ್ಕೆ ಹೆಚ್ಚುವರಿಯಾಗಿ ಒಬ್ಬ ಮತದಾನ ಸಿಬ್ಬಂದಿಯನ್ನು ನೇಮಕ ಮಾಡಬಹುದು.
* ಮಂಗಳಮುಖಿಯರು ನಾಮಪತ್ರ ನಮೂನೆಯಲ್ಲಿ ಮಹಿಳೆ ಎಂದು ಘೋಷಿಸಿಕೊಂಡಲ್ಲಿ ಅವರನ್ನು ಮಹಿಳೆ ಎಂದು ಇಲ್ಲವಾದ್ದಲ್ಲಿ ಪುರುಷರೆಂದು ಭಾವಿಸತಕ್ಕದ್ದು.

Leave a Reply

Your email address will not be published. Required fields are marked *

error: Content is protected !!