ಶಿವಮೊಗ್ಗ ಶಾಸಕರುಗಳಿಂದ ಮಂತ್ರಿಗಿರಿಗಾಗಿ ಭಾರಿ ಲಾಬಿ, ಯಾರ ಹೆಸರು ಮುಂಚೂಣಿಯಲ್ಲಿದೆ, ಶಿವಮೊಗ್ಗಕ್ಕೆಷ್ಟು ಸ್ಥಾನ ಸಿಗಬಹುದು? ಇಂದು ಕ್ಲೈಮ್ಯಾಕ್ಸ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದೆ. ಯಾರಿಗೆ ಸಂಪುಟದಲ್ಲಿ ಜಾಗ ಸಿಗಲಿದೆ ಎಂಬುವುದು ಚರ್ಚೆಯ ವಿಷಯ ವಸ್ತುವಾಗಿದೆ.
ಜಾತಿ, ಹಣ, ಪ್ರಾಬಲ್ಯ, ವರ್ಚಸ್ಸು, ಅವಕಾಶ ವಂಚಿತರು, ಪಕ್ಷ ನಿಷ್ಠರು, ಕ್ಷೇತ್ರದಲ್ಲಿನ ಖ್ಯಾತಿ, ಟ್ರ್ಯಾಕ್ ರೆಕಾರ್ಡ್ ಸೇರಿದಂತೆ ನಾನಾ ವಿಚಾರಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಲಾಗುತ್ತಿದೆ. ಪಟ್ಟಿಯಲ್ಲಿ ತಮ್ಮ ಹೆಸರೂ ಇರಬಹುದು ಎಂದು ಊಹಿಸಲಾಗುತ್ತಿದೆ.

https://www.suddikanaja.com/2020/11/04/10yrs-hosanagar-bjp/

 ಕಳೆದ ಒಂದು ವಾರದಿಂದ ಶಿವಮೊಗ್ಗ ಜಿಲ್ಲೆಯ ಶಾಸಕರುಗಳು ಮಂತ್ರಿಗಿರಿಗಾಗಿ ನಿರಂತರ ಪ್ರಯತ್ನದಲ್ಲಿದ್ದಾರೆ. ಕೆಲವರಂತೂ ಬೆಂಗಳೂರಿನಲ್ಲಿಯೇ ಮುಕ್ಕಾಂ ಹೂಡಿದ್ದಾರೆ. ಪಕ್ಷದ ವಲಯದಲ್ಲಿ ಪ್ರಸ್ತುತ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಸಾಗರದ ಶಾಸಕ ಹರತಾಳು ಹಾಲಪ್ಪ ಅವರ ಹೆಸರು ಮುಂಚೂಣಿಯಲ್ಲಿದೆ. ಇಬ್ಬರಿಗೂ ಕ್ಷೇತ್ರದಲ್ಲಿ ಉತ್ತಮ ಹೆಸರಿದೆ. ಹಾಲಪ್ಪ ಅವರಿಗೆ ಒಮ್ಮೆ ಸಚಿವರಾಗುವ ಭಾಗ್ಯ ಲಭಿಸಿದೆ. ಆದರೆ, ಆರಗ ಅವರಿಗೆ ಅದೂ ಸಾಧ್ಯವಾಗಿಲ್ಲ.
Political analysis 1ರಾಜಕಾರಣದಲ್ಲಿ ಯಡಿಯೂರಪ್ಪ ಅವರ ಸಮಕಾಲೀನರಾಗಿರುವ ಆರಗ ಅವರಿಗೆ ಈ ಸಲ ಮಂತ್ರಿ ಮಂಡಲದಲ್ಲಿ ಜಾಗ ಸಿಗಬಹುದು ಎನ್ನಲಾಗುತ್ತಿದೆ. 
ಹಾಲಪ್ಪ ಈಡಿಗ ಹಾಗೂ ಜ್ಞಾನೇಂದ್ರ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎರಡೂ ಪ್ರಬಲ ಸಮುದಾಯಗಳೇ ಆಗಿದ್ದು, ಸಚಿವ ಸ್ಥಾನಕ್ಕಾಗಿ ಬೆಂಬಲಿಗರು, ಸಮುದಾಯದ ಮುಖಂಡರುಗಳಿಂದ ಆಗ್ರಹ ಕೇಳಿಬರುತ್ತಿದೆ. ಇನ್ನೊಂದೆಡೆ ಜ್ಞಾನೇಂದ್ರ ಅವರಿಗೆ ವಿಧಾನಸಭೆ ಸಭಾಪತಿ ಸ್ಥಾನ ಹಾಗೂ ಹಾಲಪ್ಪ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಹೇಳಲಾಗುತ್ತಿದೆ.
ಜಿಲ್ಲೆಯ ಶಾಸಕರುಗಳ ಪ್ಲಸ್ ಪಾಯಿಂಟ್
ಕೆ.ಎಸ್.ಈಶ್ವರಪ್ಪ | ಕುರುಬ ಸಮಾಜಕ್ಕೆ ಸೇರಿದ್ದು, ಹಲವು ಸಲ ಸಚಿವರೂ ಸೇರಿ ಪಕ್ಷದ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಪಕ್ಷ ಸಂಘಟನೆಗಾಗಿ ಹೆಗಲು ಕೊಟ್ಟು ನಿಂತಿದ್ದಾರೆ. ಇದೆಲ್ಲ ಇವರ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿವೆ. ಆದರೆ, ಕೇಂದ್ರ ಸರ್ಕಾರ ಹೊಸಬರಿಗೆ ಅವಕಾಶ ನೀಡಬೇಕು ಎಂದು ಕೊಂಡರೆ ಅವಕಾಶ ಕೈತಪ್ಪುವ ಸಾಧ್ಯತೆ ಇದೆ. ಈ ಬಗ್ಗೆ ಖುದ್ದು ಈಶ್ವರಪ್ಪನವರೇ ಈ ಹಿಂದೆ ಮಾಧ್ಯಮಗೋಷ್ಠಿ ಕರೆದು ಸಚಿವ ಸ್ಥಾನ ಕೈತಪ್ಪಿದರೆ `ಗೂಟ ಹೋಯ್ತು’ ಎಂದುಕೊಳ್ಳುವೆ ಎಂದಿದ್ದರು.

ಆರಗ ಜ್ಞಾನೇಂದ್ರ | 1984ರಿಂದ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜ್ಞಾನೇಂದ್ರ ನಾಲ್ಕು ಸಲ ಜಯಭೇರಿ ಬಾರಿಸಿದ್ದಾರೆ. ಪಕ್ಷದ ಸಂಘಟನೆ ವಿಚಾರದಲ್ಲೂ ಅವರಿಗೆ ಉತ್ತಮ ವರ್ಚಸ್ಸು ಇದೆ. ರಾಜಕೀಯದಲ್ಲಿ ಈಶ್ವರಪ್ಪ ಅವರಿಗಿಂತ ಆರಗ ಹಿರಿಯರು. ಹೀಗಿದ್ದರೂ ಇವರಿಗೆ ಸಂಪುಟ ಪ್ರವೇಶ ಭಾಗ್ಯ ಲಭಿಸಿಲ್ಲ. ಇದೆಲ್ಲ ಪ್ಲಸ್ ಪಾಯಿಂಟ್ ಆಗಬಹುದು.
ಹರತಾಳು ಹಾಲಪ್ಪ | ಈಡಿಗ ಸಮುದಾಯಕ್ಕೆ ಸೇರಿರುವ ಇವರು ಮೂರು ಬೇರೆ ಬೇರೆ ಕ್ಷೇತ್ರಗಳಲ್ಲಿ ಗೆದ್ದು ಬಂದಿರುವ ಟ್ರ್ಯಾಕ್ ರೆಕಾರ್ಡ್ ಇದೆ. ಒಟ್ಟು ನಾಲ್ಕು ಸಲ ಜಯ ಗಳಿಸಿದ್ದಾರೆ.

ಈ ಎಲ್ಲ ಹೆಸರುಗಳು ಮುಂಚೂಣಿಯಲ್ಲಿದ್ದು, ಹೈಕಮಾಂಡ್ ಯಾರಿಗೆ ಸ್ಥಾನ ನೀಡಲಿದೆ ಎಂಬುವುದು ಇನ್ನು ಗುಟ್ಟಾಗಿಯೇ ಉಳಿದಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿರುವಂತೆ ಮಂಗಳವಾರ ರಾತ್ರಿಯೊಳಗೆ ಸಂಪುಟಕ್ಕೆ ಸೇರುವವರ ಪಟ್ಟಿ ಹೊರ ಬೀಳಲಿದ್ದು, ಯಾರಿಗೆ ಮಣೆ ಹಾಸಲಿದೆ ಎಂಬುವುದು ಗೊತ್ತಾಗಲಿದೆ. ಒಂದುವೇಳೆ, ಇಂದು ಅರ್ಧ ಪಟ್ಟಿ ಬಿಡುಗಡೆ ಮಾಡಿದ್ದಲ್ಲಿ ಮಂತ್ರಿ ಮಂಡಲದ ಕಸರತ್ತು ಮುಂದುವರಿಯಲಿದೆ.

https://www.suddikanaja.com/2021/07/28/race-begin-for-minister-portfolio-in-shivammogga/

error: Content is protected !!