ಗಾಂಧಿ ಬಜಾರ್ ಸ್ತಬ್ಧ, ಕಾರಣವೇನು, ಈಗ ಹೇಗಿದೆ ಪರಿಸ್ಥಿತಿ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗುರುವಾರ ಮುಂಜಾನೆ ಬಜರಂಗ ದಳದ ಸಹ ಸಂಚಾಲಕನ ಮೇಲೆ ಹಲ್ಲೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಬೆಳಗ್ಗೆ ಗಾಂಧಿ ಬಜಾರ್ ನಲ್ಲಿ ಈ ಸಂಬಂಧ ಗಲಾಟೆ ನಡೆದಿದ್ದು, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಬೆಳಗ್ಗೆ ಅಂಗಡಿ ಮುಂಗಟ್ಟುಗಳನ್ನು ಯಥಾ ಪ್ರಕಾರ ತೆರೆಯಲಾಗಿತ್ತು. ಆದರೆ, ಗಲಾಟೆ ಆರಂಭವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಂಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ, ಇನ್ನೂ ಅಂಗಡಿಗಳು ತೆರೆಯುವ ಹಂತದಲ್ಲಿರುವಾಗಲೇ ಬಂದ್ ಮಾಡಲಾಗಿದೆ.
ಬಲ್ಲ ಮೂಲಗಳ ಪ್ರಕಾರ, ಗಾಂಧಿ ಬಜಾರ್ ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ. ಬೈಕ್ ನಿಲುಗಡೆ ಸಂಬಂಧ ಆರಂಭವಾದ ಮಾತಿನ ಚಕಾಮಕಿ ದೊಡ್ಡ ಸ್ವರೂಪ ತಾಳಿದೆ.
ಮಧ್ಯಾಹ್ನ ಅಂಗಡಿಗಳನ್ನು ತೆರೆಯುವುದಕ್ಕೆ ಬಂದವರನ್ನೂ ವಾಪಸ್ ಹೊರಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸರ್ಕಾರಿ ರಜೆ ಇದ್ದುದ್ದರಿಂದ ಸಾರ್ವಜನಿಕರು ಖರೀದಿಗೆ ಬಂದಿದ್ದರು. ಅವರನ್ನು ಪೊಲೀಸರು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ತಂದಿದ್ದಾರೆ. ಪ್ರಸಕ್ತ ಗಾಂಧಿ ಬಜಾರ್ ಪ್ರವೇಶದಲ್ಲಿಯೇ ಪೊಲೀಸರ ಗಸ್ತು ಹಾಕಿದ್ದು, ಪ್ರಕ್ಷುಬ್ಧ ವಾತಾವರಣವಿದೆ. ಕೆಲವರ ಮೇಲೆ ಹಲ್ಲೆ ಕೂಡ ಮಾಡಲಾಗಿದ್ದು, ಅವರನ್ನು ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ಕರೆತರಲಾಗಿದೆ.
ಆಸ್ಪತ್ರೆಗೆ ಸಂಸದರ ಭೇಟಿ: ಬೆಳಗ್ಗೆ ವಾಯುವಿಹಾರಕ್ಕೆ ಬಂದಿದ್ದ ಬಜರಂಗ ದಳದ ಕಾರ್ಯಕರ್ತ ನಾಗೇಶ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆ ಮತ್ತು ಹಲ್ಲೆಯ ವಿಚಾರ ತಿಳಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಆಸ್ಪತ್ರೆಗೆ ಭೇಟಿ ಮಾಡಿ ನಾಗೇಶ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಗಾಂಧಿ ಬಜಾರ್ ಗೆ ಎಸ್.ಪಿ. ದೌಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಗಾಂಧಿ ಬಜಾರ್ ಗೆ ಭೇಟಿ ನೀಡಿದರು. ಸದ್ಯ ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಹಲ್ಲೆ ಕುರಿತಾದ ಮಾಹಿತಿಗಾಗಿ ಕ್ಲಿಕ್ ಮಾಡಿ

error: Content is protected !!