ಶಿವಮೊಗ್ಗ ಗಲಭೆ ಪ್ರಕರಣ: 62 ಜನರು ವಶಕ್ಕೆ ಪಡೆದ ಪೊಲೀಸ್ ಇಲಾಖೆ, ಇನ್ನೇನಾಯ್ತು? ಐಜಿಪಿ ಹೇಳಿದ್ದೇನು…

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಜರಂಗ ದಳ ಸಹ ಸಂಚಾಲಕ ನಾಗೇಶ್ ಮೇಲೆ ಗುರುವಾರ ಬೆಳಗ್ಗೆ ನಡೆದ ಹಲ್ಲೆ ಪ್ರಕರಣ ತಾರಕಕ್ಕೇರಿದೆ. ಅದರ ಬೆನ್ನಲ್ಲೇ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ನಗರಾದ್ಯಂತ ಅದರಲ್ಲೂ ಹಳೇ ಶಿವಮೊಗ್ಗದ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

IGP Vehicleನಿನ್ನೆಯ ಘಟನೆ ಮತ್ತು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಲು ನಗರದ ಡಿ.ಎ.ಆರ್ ಮೈದಾನದಲ್ಲಿ ಪೂರ್ವ ವಲಯದ ಐಜಿಪಿ ಎಸ್.ರವಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕರೆದಿದ್ದರು.
ಗುರುವಾರ ಹಳೇ ಶಿವಮೊಗ್ಗದ ಏಳೆಂಟು ಕಡೆ ಕಲ್ಲು ತೂರಾಟ ಮಾಡಲಾಗಿದೆ. ಅದರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಸಂಬಂಧ ಕೋಟೆ ಮತ್ತು ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 10 ಎಫ್.ಐ.ಆರ್‌ಗಳನ್ನು ದಾಖಲಿಸಲಾಗಿದೆ.
62 ಜನ ಶಂಕಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಶೀಘ್ರವೇ ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಹೇಳಿದರು.
ನಗರದಲ್ಲಿ 148 ಪ್ರದೇಶಗಳನ್ನು ಸೂಕ್ಷ್ಮ, ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಅಲ್ಲಿ ಪೂರಕ ಪೊಲೀಸ್ ಬಂದೋಬಸ್ತ್ ಕೂಡ ವಿಧಿಸಲಾಗಿದೆ. ಯಾವುದೇ ಕಾರಣಕ್ಕೂ ಪರಿಸ್ಥಿತಿ ಬಿಗಡಾಯಿಸಲು ಅವಕಾಶ ನೀಡುವುದಿಲ್ಲ ಎಂದು ಐಜಿಪಿ ರವಿ ಹೇಳಿದರು.
ಹೆಚ್ಚುವರಿ ಪೊಲೀಸರ ನಿಯೋಜನೆ: ಭದ್ರತೆ ದೃಷ್ಟಿಯಿಂದ ಪೂರ್ವ ವಲಯ ವ್ಯಾಪ್ತಿಯ ಹಾವೇರಿ, ದಾವಣಗೆರೆ, ಚಿತ್ರದುರ್ಗದಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರಾದ್ಯಂತ 22 ಚೀತಾ, 13 ಗಸ್ತು ಸಂಚಾರ ವಾಹನಗಳು ಮತ್ತು ಕಾಲ್ನಡಿಗೆ ಪೊಲೀಸರು ಗಸ್ತಿನಲ್ಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಪಿ. ಕೆ.ಎಂ.ಶಾಂತರಾಜು, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಉಪಸ್ಥಿತರಿದ್ದರು.

ಶಿವಮೊಗ್ಗ ಸ್ಥಿತಿ, ಯಾವ ರಸ್ತೆ ಬಂದ್ ಇವೆ, ಅಗತ್ಯ ವಸ್ತು ಸಿಗುತ್ತಿದೆಯೇ? ಇಲ್ಲಿದೆ ಪೂರ್ಣ ಮಾಹಿತಿ

 

error: Content is protected !!