ಬೆಳ್ಳೂರಿಗೆ ಬಂಪರ್‌ ಕೊಡುಗೆ ನೀಡಿದ ಜಿಲ್ಲಾಧಿಕಾರಿ, ಪ್ರಮುಖ 7 ದೂರುಗಳೇನು?

Belluru DC 1

 

 

ಸುದ್ದಿ ಕಣಜ.ಕಾಂ | DISTRICT | DC NADE HALLI KADE
ಹೊಸನಗರ: ತಾಲೂಕಿನ ಕೆರೆಹಳ್ಳಿ ಹೋಬಳಿ ಬೆಳ್ಳೂರು ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬೆಳ್ಳೂರು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಕುಂದು ಕೊರತೆಯ ಅರ್ಜಿ ಸ್ವೀಕರಿಸಿದ ಡಿಸಿ ಡಾ.ಆರ್.ಸೆಲ್ವಮಣಿ ಬಂಪರ್‌ ಕೊಡುಗೆಗಳನ್ನು ನೀಡಿದ್ದಾರೆ.
ರೈತರಿಗೆ ವಿವಿಧ ಸೌಲಭ್ಯವನ್ನು ಪಡೆಯಲು ಅನುಕೂಲ ಮಾಡಿಕೊಡುವ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಬಸ್ ವ್ಯವಸ್ಥೆ ಮತ್ತು ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಸೇರಿದಂತೆ ಗ್ರಾಮಸ್ಥರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ-ಕಂದಾಯ ಇಲಾಖೆ’ ಎಂಬ ಹೊಸ ಪರಿಕಲ್ಪನೆಯೊಂದಿಗೆ ಜಿಲ್ಲಾಧಿಕಾರಿಗಳ ತಂಡ ಗ್ರಾಮ ಭೇಟಿ ನೀಡಿ ಅಲ್ಲಿಯೇ ಒಂದು ದಿನ ವಾಸ್ತವ್ಯ ಮಾಡುತ್ತಿರುವುದರಿಂದ ಹಳ್ಳಿಗಳಲ್ಲಿನ ವಸ್ತುಸ್ಥಿತಿ ಬಗ್ಗೆ ಅರಿವು ಉಂಟಾಗುತ್ತಿದೆ. ಜನರು ತಮ್ಮ ಸೌಲಭ್ಯಗಳಿಗೆ, ಸಮಸ್ಯೆ ಪರಿಹಾರಕ್ಕಾಗಿ ಓಡಾಡುವುದನ್ನು ತಪ್ಪಿಸಿ, ಶೀಘ್ರವಾಗಿ ಅವರಿಗೆ ಸೌಲಭ್ಯ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಡಾ.ನಾಗೇಂದ್ರ ಹೊನ್ನಳ್ಳಿ, ಅಪರ ಜಿಲ್ಲಾಧಿಕಾರಿ

  • ಫಟಾಫಟ್ ಸಮಸ್ಯೆಗಳಿಗೆ ಸ್ಪಂದಿಸಿದ ಡಿಸಿ
  • ದೂರು ನಂ 1: ಗ್ರಾಮಸ್ಥರಾದ ದೇವೇಂದ್ರಪ್ಪ ಮಾತನಾಡಿ, ಭತ್ತ, ಜೋಳ, ಶುಂಠಿ, ಕಬ್ಬು ಬೆಳೆಗೆಳಿಗೆ ವೈಜ್ಞಾನಿಕ ಬೆಲೆ ನಿಗದಿ, ಆರ್‍ಟಿಸಿ ಯಲ್ಲಿ ಹೆಸರು ಮತ್ತು ಬೆಳೆ ನಮೂದು, ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿಯಲ್ಲಿ ಭತ್ತ ರಾಗಿ ಗೋಧಿ ಖರೀದಿ ಕೇಂದ್ರ ಸ್ಥಾಪಿಸಿ ಖರೀದಿಸುವಂತೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಬೋರ್ಡೊ ಔಷಧಿಗೆ ಕಳೆದ ಬಾರಿ ಸಬ್ಸಿಡಿ ದೊರೆತಿಲ್ಲ, 2019 ರ ಆಗಸ್ಟ್‍ನಲ್ಲಾದ ಪ್ರವಾಹದಲ್ಲಿ ಹಾನಿಗೊಳಗಾದವರಿಗೆ ಈವರೆಗೆ ಪರಿಹಾರ ದೊರೆತಿಲ್ಲ ಹಾಗೂ ಭತ್ತದ ನಾಟಿಯಲ್ಲಿ ಯಾಂತ್ರೀಕರಣದ ಸಹಾಯ, ಬಗರ್‍ಹುಕುಂ ಬೆಳೆಗಾರರಿಗೂ ಅಧಿಕೃತ ಬೆಳೆ ಮಾರಾಟ ವ್ಯವಸ್ಥೆ ದೊರಕಿಸುವಂತೆ ಮನವಿ ಮಾಡಿದರು.
    ಪರಿಹಾರ: ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ದರ ಸ್ಪರ್ಧೆ ಮತ್ತು ಮಧ್ಯವರ್ತಿಗಳನ್ನು ತಡೆಗಟ್ಟಲು ಸಹಕಾರಿ ಕ್ಷೇತ್ರದ ಬಳಕೆ ಮಾಡಿಕೊಳ್ಳಬೇಕು. ನೀವು ಸಹಕಾರ ಸೊಸೈಟಿ ರಚಿಸಿದಲ್ಲಿ ನಾವು ಮೂಲಭೂತ ಸೌಕರ್ಯ ನೀಡುತ್ತೇವೆ. ಇನ್ನು ರೈತರು ಯಂತ್ರೋಪಕರಣ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ಗ್ರಾ.ಪಂ ಮಟ್ಟದಲ್ಲೇ ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಒಂದು ದಿನ ನಿಗದಿಪಡಿಸಿಕೊಂಡು ಎಲ್ಲ ರೈತರೂ ನೊಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಿದರು.
  • ದೂರು ನಂ 2: ಗ್ರಾಮಸ್ಥರಾದ ಯೋಗೇಶ್ ಮಾತನಾಡಿ, ಬೆಳ್ಳೂರಿಗೆ ನ್ಯಾಯಬೆಲೆ ಅಂಗಡಿ ಮಂಜೂರು, ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೆ ಕ್ರಮ, ಕಾಲುಸಂಕ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.
    ಪರಿಹಾರ: ನ್ಯಾಯಬೆಲೆ ಅಂಗಡಿ ತೆರೆಯಲು ಅಧಿಸೂಚನೆ ಹೊರಡಿಸುವಂತೆ ಡಿಸಿ, ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿದರು. ಬೆಂಬಲ ಬೆಲೆಯಡಿ ಬೆಳೆ ಖರೀದಿಸಲು ರೈತರು ನೋಂದಣಿ ಮಾಡಿಕೊಳ್ಳುವ ಮೂಲಕ ಸಹಕರಿಸಬೇಕು.
  • ದೂರು ನಂ 3: ರಾಜಕುಮಾರ್ ಮಾತನಾಡಿ, ಶಾಲಾ-ಕಾಲೇಜು ಮಕ್ಕಳು ವಿದ್ಯಾಸಂಸ್ಥೆಗಳಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಕಲ್ಪಿಸಿ
    ಪರಿಹಾರ: ಈ ಹಿಂದೆ ಖಾಸಗಿ ಬಸ್ ಮಾರ್ಗ ಇದ್ದು, ಅವರು ನಡೆಸದಿದ್ದರೆ KSRTC ಬಸ್‍’ಗೆ ವ್ಯವಸ್ಥೆ ಮಾಡುತ್ತೇನೆ.
  • ದೂರು‌ ನಂ 4: ನಾಗಪ್ಪ ಅರ್ಜಿ ನೀಡಿ, ಊರಿನಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಿ.
    ಪರಿಹಾರ: ಸಣ್ಣ ಅಂಗಡಿಗಳಲ್ಲಿ ಮದ್ಯ ಮಾರಾಟ ಮತ್ತು ಸಾರ್ವಜನಿಕವಾಗಿ ಮದ್ಯ ಸೇವನೆ ಗಂಭೀರ ವಿಚಾರವಾಗಿದೆ. ಅಬಕಾರಿ ಇಲಾಖೆಯವರು ದಿಢೀರ್ ದಾಳಿ ಮತ್ತು ಪ್ರಕರಣ ದಾಖಲು ಮಾಡುವ ಮೂಲಕ, ಹಾಗೂ ಗ್ರಾಮ ಪಂಚಾಯಿತಿಯವರು ಅಂಗಡಿ ಪರವಾನಗಿ ರದ್ದುಪಡಿಸುವುದು, ಪರವಾನಗಿ ಇಲ್ಲದಿದ್ದರೆ ಕೆಇಬಿ ಎನ್‍.ಓಸಿ ರದ್ದುಪಡಿಸುವ ಮೂಲಕ ಕಡಿವಾಣ ಹಾಕಬೇಕು.
  • ದೂರು ನಂ 5: ತಮ್ಮ ಗ್ರಾಮದಲ್ಲಿ ಕೆರೆ ಒತ್ತುವರಿಯಾಗಿದೆ. ಹಲವು ಬಾರಿ ಅರ್ಜಿ ನೀಡಿದ್ದು ಈ ಬಾರಿ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
    ಪರಿಹಾರ: ಸಂಬಂಧಿಸಿದ ಅಧಿಕಾರಿಗಳು ಇದನ್ನು ಪರಿಶೀಲಿಸಿ ಇನ್ನು 10 ದಿನದಲ್ಲಿ ತೆರವುಗೊಳಿಸಬೇಕು.
  • ದೂರು ನಂ 6: ಗ್ರಾಮಗಳಲ್ಲಿ ಮೊಬೈಲ್ ನೆಟ್‍ ವರ್ಕ್ ಇಲ್ಲದೇ ಎಲ್ಲ ಕೆಲಸಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ನೆಟ್‍ ವರ್ಕ್ ಒದಗಿಸಬೇಕು.
    ಪರಿಹಾರ: ಬಿಎಸ್‍.ಎನ್‍.ಎಲ್ ವತಿಯಿಂದ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ನಡೆಯುತ್ತಿದ್ದು, 150 ಹಳ್ಳಿಗಳು ಬಾಕಿ ಇದೆ. ಶೀಘ್ರವಾಗಿ ವ್ಯವಸ್ಥೆ ಮಾಡಲಾಗುವುದು.
  • ದೂರು ನಂ 7: ಗ್ರಾಮದಲ್ಲಿ ಸ್ಮಶಾನ ಜಾಗ ನೀಡಿ.
    ಪರಿಹಾರ: ಸರ್ಕಾರಿ ಜಾಗ ಗುರುತಿಸಿ ತಿಳಿಸಿದಲ್ಲಿ, ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡಲಾಗುವುದು.
    ಸಭೆಯಲ್ಲಿ ರಸ್ತೆ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳು, ಸಾಮಾಜಿಕ ಭದ್ರತೆ, ಕಂದಾಯ ಅರಣ್ಯ, ಸೇರಿದಂತೆ ಹಲವಾರು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
Belluru DC 2
ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ.

ತಹಸಿಲ್ದಾರ್ ಗ್ರೇಡ್-2 ರಾಕೇಶ್ ಫ್ರಾನ್ಸಿಸ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸಿಲ್ದಾರ್ ರಾಜೀವ್ ಸ್ವಾಗತಿಸಿದರು, ಎಸಿ ನಾಗರಾಜ್, ಬೆಳ್ಳೂರು ಗ್ರಾ.ಪಂ ಅಧ್ಯಕ್ಷೆ ಭವಾನಿ, ಸದಸ್ಯರಾದ ತಿಮ್ಮಣ್ಣ ಬೆಳ್ಳೂರು, ಹೇಮಾವತಿ, ಪಲ್ಲವಿ, ಕವಿತ ತಾ,ಪಂ ಇಓ ಪ್ರವೀಣ್‍ ಕುಮಾರ್, ಅರಣ್ಯ ಇಲಾಖೆ ಎಸಿಎಫ್, ಡಿಸಿಎಫ್, ಆರ್.ಎಫ್‍.ಓ, ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಕಂದಾಯ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

READ | ಕಾಂಗ್ರೆಸ್ ಬುಡಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಹಾರ, ಸಿದ್ದರಾಮಯ್ಯ ವಿರುದ್ಧ ‘ಅಲೆಮಾರಿ’ ಪದಪ್ರಯೋಗ

ವೇದಿಕೆ ಕಾರ್ಯಕ್ರಮದ ನಂತರ ಹೊಸನಗರ ಶಾಸಕರಾದ ಹರತಾಳು ಹಾಲಪ್ಪನವರು ಬೆಳ್ಳೂರು ಗ್ರಾಮಕ್ಕೆ ಆಗಮಿಸಿ, ಜಿಲ್ಲಾಧಿಕಾರಿಗಳೊಂದಿಗೆ ಶಾಲೆಗಳಿಗೆ ಭೇಟಿ ನೀಡಿದರು. ಜಿಲ್ಲಾಧಿಕಾರಿಗಳು ಬೆಳ್ಳೂರಿನ ಅಂಗನವಾಡಿ, ಸ.ಕಿ.ಪ್ರಾ.ಶಾಲೆ, ಸ.ಹಿ.ಪ್ರಾ.ಶಾಲೆಗಳಿಗೆ ಭೇಟಿ ನೀಡಿ , ವಿದ್ಯಾರ್ಥಿಗಳೊಂದಿಗೆ ಸಂವಾದಿಸಿ, ಪರಿಶೀಲಿಸಿದರು. ನಂತರ ಗುಳಿ ಗುಳಿ ಶಂಕರ ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮದ ಅಭಿವೃದ್ಧಿ ಕುರಿತು ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ದೂಬೈಲು ಮತ್ತು ಮಸ್ತಾನಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿದರು.

https://suddikanaja.com/2021/04/24/liquor-seize-in-bhadravathi/

Leave a Reply

Your email address will not be published. Required fields are marked *

error: Content is protected !!