ಸುದ್ದಿ ಕಣಜ.ಕಾಂ | 18 AUG 2022 | SECTION 144
ಶಿವಮೊಗ್ಗ: ವೀರ ಸಾವರ್ಕರ್ ಅವರ ಫ್ಲೆಕ್ಸ್ ತೆರವುಗೊಳಿಸಿದ ಬೆನ್ನಲ್ಲೇ ಶಿವಮೊಗ್ಗ ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ತಕ್ಷಣ ಜಿಲ್ಲಾಡಳಿತ ಆಗಸ್ಟ್ 18ರ ವರೆಗೆ ನಿಷೇಧಾಜ್ಞೆಯನ್ನು ವಿಧಿಸಿತ್ತು. ಪರಿಸ್ಥಿತಿ ಶಾಂತಗೊಂಡಿದ್ದರೂ ಮುಂಜಾಗ್ರತೆ ಕ್ರಮವಾಗಿ ಹಲವು ನಿಬಂಧನೆಗಳೊಂದಿಗೆ 20ರ ಬೆಳಗ್ಗೆ 6 ಗಂಟೆಯವರೆಗೆ ಕಲಂ 144 ಅನ್ವಯ ನಿಷೇಧಾಜ್ಞೆ ಮುಂದುವರಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಗುರುವಾರ ಆದೇಶ ಹೊರಡಿಸಿದ್ದು, ಅದರಂತೆ ಆ.18ರ ರಾತ್ರಿ 10ರಿಂದ 20ರ ಬೆಳಗ್ಗೆ 6 ಗಂಟೆಯವರೆಗೆ ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದೆ.
READ | ಸೆಕ್ಷನ್ 144 ಏನೆಲ್ಲ ನಿಯಮಗಳು ಅನ್ವಯ?
ಆದೇಶದಲ್ಲಿರುವ ನಿಬಂಧನೆಗಳಿವು
- ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
- ಯಾವುದೇ ಮೆರವಣಿಗೆ ಸಭೆ, ಸಮಾರಂಭಗಳು, ವಿಜಯೋತ್ಸವ ಹಾಗೂ ಸಾರ್ವಜನಿಕ/ ರಾಜಕೀಯ ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ.
- ಯಾವುದೇ ರೀತಿ ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಾಗೂ ಸ್ಫೋಟಕಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಸಂಗ್ರಹಿಸುವುದು ನಿಷೇಧಿಸಲಾಗಿದೆ.
- ನಿಷೇಧಾಜ್ಞೆ ಕಾರ್ಯದಲ್ಲಿ ನಿಯೋಜಿತರಾದ ಅಧಿಕಾರಿಗಳು, ಸಿಬ್ಬಂದಿಗೆ ಅಗತ್ಯ ಸಹಕಾರ ನೀಡುವುದು
- ನಿಷೇಧಾಜ್ಞೆ ಅವಧಿಯಲ್ಲಿ ಎಲ್ಲ ಬೈಕ್ ಸವಾರರು 40 ವರ್ಷದೊಳಗಿನ ಗಂಡಸರನ್ನು ಹಿಂಬದಿ ಸವಾರರಾಗಿ ಕೂರಿಸಿಕೊಂಡು ಹೋಗುವಂತಿಲ್ಲ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ)
- ವ್ಯಕ್ತಿ / ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ / ದಹನ ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ ಹಾಗೂ ಭಿತ್ತಿಚಿತ್ರಗಳನ್ನು ತೋರಿಸುವುದು ನಿಷೇದಿಸಲಾಗಿದೆ.
- ರಾತ್ರಿ 9ರಿಂದ ಬೆಳಗಿನ ಜಾವ 5ರ ರವೆಗೆ ದ್ವಿ ಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. (ತುರ್ತು ಸಂದರ್ಭವನ್ನು ಹೊರತುಪಡಿಸಿ)
- ಎಲ್ಲ ಚಿತ್ರಮಂದಿರಗಳಲ್ಲಿ ರಾತ್ರಿ 9 ಗಂಟೆ ನಂತರ ಪ್ರದರ್ಶನ ನಿಷೇಧ