ಖೆಡ್ಡಾ ಆಪರೇಷನ್ ನಲ್ಲಿ ಸೆರೆ ಸಿಕ್ಕ ರಾಜ್ಯದ ಹಿರಿಯ ಹೆಣ್ಣಾನೆ ಸಾವು, ಏನಾಗಿತ್ತು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ಹಿರಿಯ ಹೆಣ್ಣಾನೆ ಹಾಗೂ ಸಕ್ರೆಬೈಲು ಆನೆಬಿಡಾರದ ಪಾಲಿಗೆ ದೊಡ್ಡ ಆಸ್ತಿಯಾಗಿದ್ದ ಗೀತಾ (85) ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾಳೆ.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಆನೆ ಕಳೆದ 10-15 ದಿನಗಳಿಂದ ಸರಿಯಾಗಿ ಆಹಾರ ಸೇವನೆ ಮಾಡುತ್ತಿರಲಿಲ್ಲ. ಕುಳಿತುಕೊಂಡರೂ ಎದ್ದೆಳಲು ಸಮಸ್ಯೆ ಆಗುತ್ತಿತ್ತು. ಸರಿಯಾಗಿ ಸೇವನೆ ಮಾಡದೇ ಇದ್ದುದ್ದರಿಂದ ನಿರ್ಜಲೀಕರಣದ ಸಮಸ್ಯೆಯೂ ಆಗಿತ್ತು. ಈ ಎಲ್ಲ ಕಾರಣಗಳಿಂದ ಗೀತಾ ಸಕ್ರೆಬೈಲು ಆನೆಬಿಡಾರ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾಳೆ.
1964ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿಗೆ ಸೇರಿದ ಕಾಕನಕೋಟೆಯಲ್ಲಿ ಸೆರೆ ಸಿಕ್ಕಿದ್ದ ಆನೆ ಸಕ್ರೆಬೈಲು ಆನೆಬಿಡಾರಕ್ಕೆ ಬಂದು ಗೀತಾ ಎಂದು ನಾಮಕರಣಗೊಂಡಿದ್ದಳು. ಕಳೆದ 56 ವರ್ಷಗಳಲ್ಲಿ ರಾಜ್ಯದ ಅತಿ ದೊಡ್ಡ ಆನೆಬಿಡಾರ ಖ್ಯಾತಿಯ ಸಕ್ರೆಬೈಲಿನಲ್ಲಿ ಸಾಕಷ್ಟು ಸೇವೆ ನೀಡಿದ್ದಾಳೆ. ಅತ್ಯಂತ ಅನುಭವಿ ಆನೆಯಾಗಿದ್ದರಿಂದ ಆನೆಗಳನ್ನು ಹಿಡಿಯುವುದಕ್ಕೂ ಗೀತಾಳನ್ನು ಕರೆದುಕೊಂಡು ಹೋಗಲಾಗುತ್ತಿತ್ತು.

video news: http://https://youtu.be/_8nyxeJYEVI

 

ಅರ್ಥಪೂರ್ಣ ಬದುಕು

  • ಕಳೆದ ವರ್ಷ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಗೀತಾಗೆ ವಯಸ್ಸಾಗಿದ್ದರಿಂದ ಜಂಬೂ ಸವಾರಿಯಿಂದ ನಿವೃತ್ತಿ ನೀಡಲಾಗಿತ್ತು. ಆರೇಳು ಸಲ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಈಕೆ ಶಿವಮೊಗ್ಗ ಜನರ ಮನಸ್ಸು ಗೆದ್ದಿದ್ದಳು. ಗಜ ಗಾಂಭೀರ್ಯ ನಡೆಯಿಂದ ಜಂಬೂಸವಾರಿಯ ಕೇಂದ್ರವಾಗಿದ್ದಳು.
  • ಈ ಹಿಂದೆ ಅರಣ್ಯ ಇಲಾಖೆ ಕಾಡಿನಿಂದ ಮರದ ದಿಮ್ಮಿಗಳನ್ನು ಸಾಗಿಸುವುದಕ್ಕಾಗಿ ಆನೆಗಳನ್ನು ಬಳಸುತ್ತಿತ್ತು. ಅದರಲ್ಲೂ ಸಾಕಷ್ಟು ಕೆಲಸ ಮಾಡಿದ್ದಾಳೆ. ಕುದುರೆಮುಖಕ್ಕೂ ಈ ಕೆಲಸಕ್ಕಾಗಿ ಹೋಗಿ ಬಂದಿದ್ದಾಳೆ.
  • ಪುಂಡಾನೆಗಳನ್ನು ಹಿಡಿಯಬೇಕಾದರೆ, ಗೀತಾ ಇರಲೇಬೇಕಿತ್ತು. ಅದಕ್ಕಿರುವ ಅನುಭವದ ಎದುರು ಎಂತಹ ಗಂಡಾನೆಯೂ ಮೋಹ ಜಾಲಕ್ಕೆ ಬೀಳುತ್ತಿತ್ತು. ಆಗ ಸುಲಭವಾಗಿ ಪುಂಡಾನೆ ಹಿಡಿಯಲು ಅನುಕೂಲವಾಗುತ್ತಿತ್ತು.
  • ಸಕ್ರೆಬೈಲು ಆನೆಬಿಡಾರದಲ್ಲಿ ಹೆಣ್ಣಾನೆಗಳ ಹೆರಿಗೆ ಮಾಡಿಸುವುದು, ಪ್ರಸೂತಿ ಪೂರ್ವ ಮತ್ತು ನಂತರದ ಆರೈಕೆಯಲ್ಲಿ ಗೀತಾ ಮುಂಚೂಣಿಯಲ್ಲಿರುತ್ತಿದ್ದಳು. ಹಿರಿಯಾನೆಯಾದ್ದರಿಂದ ಸಹಜವಾಗಿಯೇ ಅಜ್ಜಿಯ ಸ್ಥಾನದಲ್ಲಿ ನಿಂತು ಈ ಕೆಲಸಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿತ್ತು.
  • ರೈಡಿಂಗ್, ಕ್ರಾಲ್ ನಿರ್ಮಾಣದಲ್ಲೂ ಭಾರಿ ಸಹಕಾರ ನೀಡುತ್ತಿದ್ದ ಆನೆ ಇದು.
  • ತಾಯಿಯಿಂದ ಮರಿಯಾನೆಯನ್ನು ವೀನಿಂಗ್ (ಹಾಲು ಬಿಡಿಸುವುದಕ್ಕೆ) ಮಾಡುವುದಕ್ಕೂ ಇದು ಬಹುದೊಡ್ಡ ಪಾತ್ರ ವಹಿಸುತ್ತಿತ್ತು.

error: Content is protected !!