Railway | ತಾಳಗುಪ್ಪ-ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗದ ಸರ್ವೇ ವರದಿ‌ ನವೆಂಬರ್ ನಲ್ಲಿ ಸಲ್ಲಿಕೆ

Train

 

 

ಸುದ್ದಿ ಕಣಜ.ಕಾಂ | DISTRICT | 31 AUG 2022
ಶಿವಮೊಗ್ಗ: ತಾಳಗುಪ್ಪ(Talaguppa)-ಹುಬ್ಬಳ್ಳಿ (Hubballi) ನೂತನ ರೈಲ್ವೆ ಮಾರ್ಗದ ಕುರಿತು ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಅದರ ವರದಿಯು ನವೆಂಬರ್ ತಿಂಗಳಲ್ಲಿ ರೈಲ್ವೆ ಇಲಾಖೆಗೆ ಸಲ್ಲಿಕೆಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (BY Raghavendra) ತಿಳಿಸಿದರು.
ರೈಲ್ವೆ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ‌ ಅವರು, ಈ ಮಾರ್ಗ ಅನುಷ್ಠಾನದ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸುವಂತೆ ರೈಲ್ವೆ ಸಚಿವರನ್ನು ಒತ್ತಾಯಿಸಲಾಗುವುದು ಎಂದರು.
ಜಿಲ್ಲೆಯ ಕಡದಕಟ್ಟೆ, ವಿದ್ಯಾನಗರ, ಶಿಕಾರಿಪುರ ರಸ್ತೆ ಹಾಗೂ ಕಾಶೀಪುರ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿಗಳಿಗೆ ವೇಗ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಹೇಳಿದರು.

READ | ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ, ಅದ್ಧೂರಿ ಮೆರವಣಿಗೆ

BY Raghavendra

ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು?

  • ಶಿವಮೊಗ್ಗ-ಶಿಕಾರಿಪುರ ನೂತನ ರೈಲ್ವೇ ಮಾರ್ಗದ ಮೊದಲ ಹಂತದ ಕಾಮಗಾರಿ ಆರಂಭಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಭಾಗದಲ್ಲಿ ಎದುರಾಗುವ ಸಣ್ಣ-ಪುಟ್ಟ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು.
  • ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗದ ಎರಡನೇ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
  • ಈ ಹಿಂದೆ ಶಿವಮೊಗ್ಗದಿಂದ ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ಸಂಚರಿಸುವ ರೈಲನ್ನು ವಾರ ಪೂರ್ತಿ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಅಂತೆಯೇ ಶತಾಬ್ದಿ ಸೇರಿದಂತೆ ಶಿವಮೊಗ್ಗ ಭಾಗದಲ್ಲಿ ಸಂಚರಿಸುವ ಎಲ್ಲ ರೈಲುಗಳ ವ್ಯವಸ್ಥಿತ ನಿರ್ವಹಣೆಗೆ ಮನವಿ ಮಾಡಲಾಗಿದೆ.
  • ವಯಸ್ಕರ ಪ್ರಯಾಣಿಕರು ನಿಲ್ದಾಣದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸಲು ದೈತ್ಯ ಮೆಟ್ಟಿಲುಗಳನ್ನು ಹತ್ತುವುದು ಪ್ರಯಾಸಕರ. ಆದ್ದರಿಂದ ಒಂದು ವಿದ್ಯುತ್ ಚಾಲಿತ ಎಕ್ಸ್‌ಲೇಟರ್‌ನ್ನು ಅಳವಡಿಸುವಂತೆಯೂ ಮನವಿ ಮಾಡಲಾಗಿದ್ದು, ರೈಲ್ವೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
  • ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕಾಗಿ ಅಗತ್ಯವಿರುವ 10 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದರಿಂದಾಗಿ 28 ಎಕರೆ ಕೋಚಿಂಗ್ ಡಿಪೋಗೆ ದೊರೆದಂತಾಗಲಿದೆ.  ಇದರಿಂದಾಗಿ ಕೋಚಿಂಗ್ ಡಿಪೋ ಅಭಿವೃದ್ಧಿಗೆ, ರೈಲು ನಿಲ್ದಾಣಕ್ಕೆ, ಗೂಡ್ಸ್ ಶೆಡ್ ನಿರ್ಮಾಣ ಹಾಗೂ ನಗರದ ಮಾಲಿನ್ಯ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಮಾತ್ರವಲ್ಲ ಸರಕು ಸಾಗಾಣಿಕೆಗೂ ಸಹಕಾರಿಯಾಗಲಿದೆ.
  • ರಾಜ್ಯ ಸರ್ಕಾರವು ಜಗತ್ಪ್ರಸಿದ್ಧ ಜೋಗ ಜಲಪಾತದ ಸರ್ವಾಂಗೀಣ ವಿಕಾಸಕ್ಕೆ ಕೋಟ್ಯಂತರ ರೂ.ಗಳ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಪಡಿಸುತ್ತಿದೆ. ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸುಮಾರು 6 ಕಿ.ಮೀ.ಗಳ ವ್ಯಾಪ್ತಿಯಲ್ಲಿ ರೋಪ್‌ ವೇ ನಿರ್ಮಿಸಲು ಉದ್ದೇಶಿಸಲಾಗಿದೆ.

READ | ಭದ್ರಾವತಿಯಲ್ಲಿ ಪೊಲೀಸರ ಭರ್ಜರಿ‌ ಕಾರ್ಯಾಚರಣೆ, ನಾಲ್ವರ ಬಂಧನ

ಜಿಲ್ಲೆಗೆ ಪ್ರವಾಸಿಗಳ ಸಂಖ್ಯೆಯಲ್ಲಿ ಹೆಚ್ಚಳ ಸಾಧ್ಯತೆ
ಈ ಎಲ್ಲ ಬೆಳವಣಿಗೆಗಳಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ದೊರೆತಂತಾಗಲಿದೆ. ಇದರಿಂದಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಲಿದೆ. ಆದ್ದರಿಂದ ಜೋಗ (ಜಂಬಗಾರು) ರೈಲ್ವೆ ನಿಲ್ದಾಣವನ್ನು ಉನ್ನತೀಕರಿಸುವುದರ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಪ್ಲಾಟ್‌ ಫಾರಂ ಅನ್ನು ನಿರ್ಮಿಸಲು ಮನವಿ ಮಾಡಲಾಗಿದೆ. ಈ ಕಾರ್ಯವು ಡಿಸೆಂಬರ್ – ಜನವರಿ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೂಲಸೌಕರ್ಯಗಳನ್ನು ಒದಗಿಸಲು ಹಾಗೂ ರೈಲ್ವೆ ಮೇಲ್ಸೇತುವೆಗಳ  ಕೆಳಹಂತದಲ್ಲಿ ನಿಲ್ಲುವ ಮಳೆ ನೀರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಒದಗಿಸಲು ಕ್ರಮ ವಹಿಸಲಾಗುವುದು. ಈ ಕಾರ್ಯಕ್ಕಾಗಿ ₹14 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.
2023ರಲ್ಲಿ ಬೀರೂರು ತಾಳಗುಪ್ಪ ರೈಲು ಮಾರ್ಗ ವಿದ್ಯುದ್ದೀಕರಣ
ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಸಂಜೀವ್‌ ಕುಮಾರ್ ಮಾತನಾಡಿ, 2023ರ ಡಿಸೆಂಬರ್ ತಿಂಗಳೊಳಗಾಗಿ ಬೀರೂರು ತಾಳಗುಪ್ಪ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಿ, ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ನೈರುತ್ಯ ರೈಲ್ವೆಯ ವ್ಯಾಪ್ತಿಯಲ್ಲಿನ ಇತರೆ ರೈಲು ನಿಲ್ದಾಣಗಳನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ಸರ್ ಎಂ.ವಿ. ರೈಲು ನಿಲ್ದಾಣದ ರೀತಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಜೊತೆಗೆ ರೈಲು ಪ್ರಯಾಣಿಕರ ಸುರಕ್ಷತೆಗೂ ಗಮನಹರಿಸಲಾಗುವುದು ಎಂದರು.   
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‌ ವಾಲ್, ಚೀಫ್ ಎಂಜಿನಿಯರ್ ಎಸ್.ಬಿ.ಎಸ್.ಗುಪ್ತಾ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಪ್ರಧಾನ ಆಡಳಿತಾಧಿಕಾರಿ ಆರ್.ಎಲ್.ಮೀನಾ, ಹಿರಿಯ ವಿಭಾಗೀಯ ಎಂಜಿನಿಯರ್ ಕೆ.ರವಿಚಂದ್ರ, ಭರತ್ ತಿವಾರಿ, ಮಂಜುನಾಥ್ ಕೆ. ಸುಂದರ್‌ ರಾಜನ್, ಶ್ರೀಧರ್‌ಮೂರ್ತಿ ಉಪಸ್ಥಿತರಿದ್ದರು.

https://suddikanaja.com/2020/12/16/sports-village-in-shivamogga-said-mp-by-raghavendra/

Leave a Reply

Your email address will not be published. Required fields are marked *

error: Content is protected !!