Namma nade shanthi kade | ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಪಾದಯಾತ್ರೆ 10 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ

Dhananjay sarji

 

 

ಸುದ್ದಿ ಕಣಜ.ಕಾಂ | DISTRICT | 01 SEPT 2022
ಶಿವಮೊಗ್ಗ: ಜಿಲ್ಲೆಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕೆಂಬ ಕಾರಣಕ್ಕೆ ಸೆಪ್ಟೆಂಬರ್ 3ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಘೋಷವಾಕ್ಯದಡಿ ಬೃಹತ್ ಪಾದಯಾತ್ರೆ ನಡೆಯಲಿದೆ.
ಸಾಹಿತ್ಯ, ಸಂಸ್ಕೃತಿ ಹಾಗೂ ಸುಸಂಸ್ಕೃತರ ತವರಾದ ಜಿಲ್ಲೆಯಲ್ಲಿ ಇತ್ತೀಚೆಗೆ ಅಶಾಂತಿಯ ವಾತಾವರಣ ಮೂಡಿದೆ. ಈ ಹಿನ್ನೆಲೆಯಲ್ಲಿ ಶಾಂತಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಗುರುಗಳು, 27ಕ್ಕೂ ಹೆಚ್ಚು ಶಾಲೆಯ 6ರಿಂದ 7 ಸಾವಿರ ಮಕ್ಕಳು, ರೈತ ಹೋರಾಟಗಾರರು, 2 ಸಾವಿರಕ್ಕೂ ಹೆಚ್ಚು ಮಹಿಳೆಯರು, ನಾಗರಿಕರು, ಸಮಾನ ಮನಸ್ಕರು, ಪ್ರಜ್ಞಾವಂತರು, ಪ್ರಗತಿಪರ ಚಿಂತಕರು, ವ್ಯಾಪಾರಸ್ಥರು, ಪ್ರಗತಿಪರ ಚಿಂತಕರು, ಸಂಘ, ಸಂಸ್ಥೆಗಳು, ಸಂಘಟನೆಗಳು, ಹಾಗೂ ನೂರಾರು ಸ್ವಯಂ ಸೇವಕರು, ವರ್ತಕರು, ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ 10 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ.
ಶಾಂತಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಶಾಂತಿ ಸಂದೇಶ ಸಾರುವ ಪ್ಲೇ ಕಾರ್ಡ್ ಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗುವರು. ಶಾಂತಿ ನಡಿಗೆ ಸಂದರ್ಭ ಶಾಲಾ ಮಕ್ಕಳಿಗೆ ಬಿಸ್ಕತ್ತು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವ ಶಾಲಾ ಮಕ್ಕಳನ್ನು ಆಯಾ ಶಾಲೆಗಳೇ ತಮ್ಮ ವಾಹನಗಳಲ್ಲಿ ಕರೆ ತಂದು ವಾಪಾಸು ಕರೆದುಕೊಂಡು ಹೋಗಲಿವೆ. ನಡಿಗೆಯುದ್ದಕ್ಕೂ ಖಾಲಿ ಬಾಟಲಿ ಸೇರಿದಂತೆ ಇತರೆ ತ್ಯಾಜ್ಯವನ್ನು ಸಂಗ್ರಹಿಸುವ ವಾಹನ ಸಾಗಿ ಬರಲಿದ್ದು, ಸ್ವಯಂ ಸೇವಕರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದಾರೆ. ಅಲ್ಲದೇ ಆಂಬ್ಯುಲೆನ್ಸ್ ಸೇವೆ ಕೂಡ ಲಭ್ಯ ಇರುತ್ತದೆ.
ಶಾಂತಿ ನಡಿಗೆ ಸಾಗುವ ಮಾರ್ಗ
ಸೆಪ್ಟೆಂಬರ್ 3 ರಂದು ಶಾಂತಿ ನಡಿಗೆಯು ನಗರದ ಮೂರು ಪ್ರಮುಖ ಮಾರ್ಗಗಳಿಂದ ಶುರುವಾಗಲಿದೆ. ಡಿಎಆರ್ ಗ್ರೌಂಡ್‌ನಿಂದ ನಗರದ ಮುಖ್ಯ ಬಸ್ ನಿಲ್ದಾಣ ಮಾರ್ಗವಾಗಿ ಎಎ ಸರ್ಕಲ್, ಅಂಬೇಡ್ಕರ್ ಭವನದ ಬಳಿಯಿಂದ ಗೋಪಿ ಸರ್ಕಲ್ ಮಾರ್ಗವಾಗಿ ಎಎ ಸರ್ಕಲ್ ಹಾಗೂ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಶಿವಪ್ಪನಾಯಕ ವೃತ್ತದ ಮೂಲಕ ಹಾದು ಬರುವ ಶಾಂತಿ ನಡಿಗೆಯು ಧರ್ಮ ಗುರುಗಳ ನೇತೃತ್ವದಲ್ಲಿ ಅಮೀರ್ ಅಹಮದ್ ವೃತ್ತ, ಶಿವಪ್ಪನಾಯಕ ವೃತ್ತದ ಮೂಲಕ ಬಿ.ಎಚ್.ರಸ್ತೆಯಯಲ್ಲಿ ಸಾಗಿ ಸೈನ್ಸ್ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ. ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಜಡೆಮಠದ ಡಾ.ಶ್ರೀ ಮಹಾಂತ ಸ್ವಾಮೀಜಿ, ಕ್ರೈಸ್ತ ಧರ್ಮಗುರು ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ., ಸೇಕ್ರೆಡ್ ಹಾರ್ಟ್ ಚರ್ಚ್ನ ಫಾದರ್ ಸ್ಟ್ಯಾನಿ, ಎಸ್‌ಎಂಎಸ್‌ಎಸ್‌ಎಸ್ ನಿರ್ದೇಶಕ ಡಾ.ಕ್ಲಿಫರ್ಡ್ ರೋಷನ್ ಪಿಂಟೊ, ಮುಸ್ಲಿಂ ಮೌಲ್ವಿ ಶಾಂತಿ ಸಂದೇಶ ನೀಡುವರು. ಸೈನ್ಸ್ ಮೈದಾನದಲ್ಲಿ ಎಲ್‌.ಇಡಿ ವಾಲ್‌ ಗಳನ್ನು ಅಳವಡಿಸಲಾಗುತ್ತದೆ. ಅಲ್ಲದೇ ಫೇಸ್ ಬುಕ್ ನೇರ ಪ್ರಸಾರ ಮಾಡಲಾಗುವುದು.
ರಾಜ್ಯ ರೈತ ಸಂಘದ ಅಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪ, ವಕೀಲ ಕೆ.ಪಿ.ಶ್ರೀಪಾಲ್, ಡಿಎಸ್‌.ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಹಾಲೇಶಪ್ಪ, ಪರ್ವೇಜ್ ಅಹಮದ್, ಡಾ.ಕ್ಲಿಫರ್ಡ್ ರೋಷನ್ ಪಿಂಟೊ, ಪ್ರಾಂಶುಪಾಲ ಕೃಷ್ಣಮೂರ್ತಿ, ಜೆಸಿಐನ ಪುಷ್ಪಾ, ಡಾ.ಭರತ್ ಮತ್ತಿತರರು ಹಾಜರಿದ್ದರು.

READ | ನಾಳೆ ನಡೆಯಬೇಕಿದ್ದ ಡಿಪ್ಲೋಮಾ ಥಿಯರಿ ಪರೀಕ್ಷೆ ಮುಂದೂಡಿಕೆ, ಯಾವಾಗ ನಡೆಯಲಿದೆ ಪರೀಕ್ಷೆ?

ಯಾರು ಏನು ಹೇಳಿದರು?

ನಿರಂತರ ಗಲಭೆಗಳಿಂದಾಗಿ ಆರ್ಥಿಕ ಹಿನ್ನಡೆಯಾಗುತ್ತಿದೆ. ಪ್ರತಿ ಸಲ ಗಲಾಟೆ ಆದಾಗಲೂ ಜಿಲ್ಲೆ ಮೂರು ವರ್ಷಗಳಷ್ಟು ಹಿಂದೆ ಹೋಗುತ್ತಿದೆ. ಎಂಟು ತಿಂಗಳಲ್ಲಿ ₹300 ಕೋಟಿಗೂ ಅಧಿಕ ನಷ್ಟವಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಶಾಂತಿ ನೆಲೆಸಲಿ ಎಂಬ ಮಹತ್ವಾಕಾಂಕ್ಷೆಯೊಂದಿಗೆ ನಮ್ಮ‌ ನಡೆ ಶಾಂತಿಯ ಕಡೆಗೆ ಆಯೋಜಿಸಲಾಗಿದೆ.
| ಡಾ.ಧನಂಜಯ್ ಸರ್ಜಿ, ಮ್ಯಾನೇಜಿಂಗ್ ಟ್ರಸ್ಟಿ, ಸರ್ಜಿ ಫೌಂಡೇಶನ್‌

ಸೆಪ್ಟೆಂಬರ್ 3ರಂದು ನಡೆಯುವ ಶಾಂತಿಯ ನಡಿಗೆ ಯಾರ ವಿರುದ್ಧವೂ ಅಲ್ಲ. 61 ಸಂಘ- ಸಂಸ್ಥೆಗಳು ಇದಕ್ಕೆ ಬೆಂಬಲ ನೀಡಿವೆ. ಎಲ್ಲರೂ ಇದಕ್ಕೆ ಸಹಕರಿಸಲು ಕೋರಿಕೆ
| ಕೆ.ಕಿರಣ್‌ಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌

ಶಿವಮೊಗ್ಗಕ್ಕೆ ಶ್ರೇಷ್ಠ ನಗರವಾಗುವ ಎಲ್ಲ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ‌ ಶಾಂತಿ ನೆಲೆಸುವ ಉದ್ದೇಶದಿಂದ ಈ‌ ಹೆಜ್ಜೆ ಇಡಲಾಗಿದೆ.
|‌ ಕೆ.ವಿ.ವಸಂತ ಕುಮಾರ್, ಪ್ರಮುಖರು, ನಾಗರಿಕ ಹಿತ ರಕ್ಷಣಾ ವೇದಿಕೆ

ಬಸವಣ್ಣನವರ ಶಾಂತಿ‌ ಸಂದೇಶವನ್ನು ಎಲ್ಲರೂ ಪಾಲಿಸಬೇಕು. ಒಡೆದ‌ ಮನಸ್ಸುಗಳನ್ನು ಮರು ಜೋಡಿಸುವ ಕೆಲಸ ಮಾಡಲಾಗುತ್ತಿದೆ.
| ಕೆ.ಟಿ.ಗಂಗಾಧರ್, ರೈತ ಮುಖಂಡ

https://suddikanaja.com/2021/01/16/amit-shah-lay-the-foundation-stone-for-a-new-campus-of-rapid-action-force-in-bhadravathi/

Leave a Reply

Your email address will not be published. Required fields are marked *

error: Content is protected !!