VISL | ವಿಐಎಸ್.ಎಲ್ ಖಾಸಗೀಕರಣ ಪ್ರಕ್ರಿಯೆಗೆ ಬ್ರೇಕ್, ಕೇಂದ್ರದ ಚಳಿಗಾಲ ಅಧಿವೇಶನದಲ್ಲಿಕಾರ್ಖಾನೆ ಪರ ಬ್ಯಾಟಿಂಗ್ ಮಾಡುವುದಾಗಿ ಘೋಷಿಸಿದ ಬಿವೈಆರ್

VISL

 

 

HIGHLIGHTS

  • ಭದ್ರಾವತಿಯ VISL ಖಾಸಗೀಕರಣ ಪ್ರಕ್ರಿಯೆ ಹಿಂಪಡೆದ ಕೇಂದ್ರ ಸರ್ಕಾರ
  • ಬಂಡವಾಳ‌ ಹೂಡಿಕೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಭರವಸೆ ನೀಡಿ ಸಂಸದ ರಾಘವೇಂದ್ರ

ಸುದ್ದಿ ಕಣಜ.ಕಾಂ | DISTRICT | 15 OCT 2022
ಶಿವಮೊಗ್ಗ: ಮುಂಬರುವ ಕೇಂದ್ರದ ಚಳಿಗಾಲ ಅಧಿವೇಶನದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಪರ‌ ದನಿ‌ ಎತ್ತಲಾಗುವುದು. ಬಂಡವಾಳ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆಯನ್ನು ಹಿಂಪಡೆದಿದೆ. ಈ ಮೂಲಕ ಕಾರ್ಖಾನೆಯ ಅಭಿವೃದ್ಧಿಯ ಜವಾಬ್ದಾರಿ ಇಮ್ಮಡಿಯಾಗಿದೆ ಎಂದು ತಿಳಿಸಿದರು.
ನಷ್ಟದಲ್ಲಿದ್ದ ಕಾರ್ಖಾನೆಯನ್ನು ಬಂಡವಾಳ ತೊಡಗಿಸಿ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿತ್ತು. ಮೂರು ಬಾರಿ ಕೇಂದ್ರ ಸಚಿವರನ್ನು ಕಾರ್ಖಾನೆಗೆ ಭೇಟಿ ಮಾಡಿಸಿದ್ದರೂ ಅಭಿವೃದ್ಧಿಯಾಗಿರಲಿಲ್ಲ. ಇದರಿಂದಾಗಿ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಯತ್ನಿಸಿ ಜಾಗತಿಕ ಟೆಂಡರ್ ಮೂಲಕ ಖಾಸಗೀಕರಣ ಪ್ರಕ್ರಿಯೆಗೆ ಯತ್ನಿಸಿತ್ತು. ಆದರೆ ಖಾಸಗಿಯವರು ಕಾರ್ಖಾನೆ ಕೊಳ್ಳಲು ಮುಂದೆ ಬರದ ಹಿನ್ನೆಲೆಯಲ್ಲಿ ಖಾಸಗೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ವಿವರಿಸಿದರು.
2016ರಿಂದ ಖಾಸಗೀಕರಣಗೊಳಿಸುವ ಪ್ರಯತ್ನ
ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಜಿ. ಜಗದೀಶ್ ಮಾತನಾಡಿ, 2016ರಿಂದ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
1918ರಲ್ಲಿ ಆರಂಭವಾದ ಕಾರ್ಖಾನೆ ವಿಶ್ವವಿಖ್ಯಾತವಾಗಿದ್ದು, ಖಾಸಗಿ ಕಾರ್ಖಾನೆಗಳ ಪೈಪೋಟಿಯಿಂದಾಗಿ ಸ್ಪರ್ಧೆ ನೀಡಲು ಸಾಧ್ಯವಾಗಲಿಲ್ಲ. ಈಗಿರುವ ಯಂತ್ರೋಪಕರಣಗಳು ಹಳೆಯದಾಗಿದ್ದು, ಉತ್ಪಾದನೆ ಸಹ ಕುಂಠಿತವಾಗಿದೆ. ಸಾಕಷ್ಟು ಬಾರಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ಹೂಡಲು ಮನವಿ ಹಾಗೂ ಹೋರಾಟ ಮಾಡಿದ್ದರೂ ಬಂಡವಾಳ ಹೂಡಿಕೆಯಾಗಿಲ್ಲ. ಇದರಿಂದಾಗಿ ಉತ್ಪಾದನೆ ಕಡಿಮೆಯಾಗುವುದರ ಜೊತೆಗೆ ನಷ್ಟವೂ ಆಗುತ್ತಿದೆ.

READ | ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಬಲ, ಏನಿದು ಯೋಜನೆ?

ಮೈಲಿಗಲ್ಲು ಸ್ಥಾಪಿಸಿದ್ದ VISL

  • 3 ದಶಕಗಳ ಕಾಲ ವಿಶ್ವವಿಖ್ಯಾತಿ ಪಡೆದು ಉತ್ಪಾದನೆಯಲ್ಲಿ ಪಾರಮ್ಯ ಮೆರೆದಿದ್ದ ಕಾರ್ಖಾನೆ ವಿಐಎಸ್ಎಲ್. ಒಂದು ಕಾಲದಲ್ಲಿ 12 ಸಾವಿರಕ್ಕೂ ಹೆಚ್ಚು ಕಾಯಂ ಕಾರ್ಮಿಕರು, 4 ಸಾವಿರ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡಿತ್ತು.
  • 1980 ರ ನಂತರ 50-60 ವರ್ಷ ಹಳೆಯದಾದ ಯಂತ್ರೋಪಕರಣಗಳು ಮತ್ತು ಹಳೆಯ ತಾಂತ್ರಿಕತೆಯಿಂದಾಗಿ ನಿರಂತರ ನಷ್ಟ ಅನುಭವಿಸುತ್ತಾ ಬಂದ ಪರಿಣಾಮ ರಾಜ್ಯ ಸರ್ಕಾರ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಒಡೆತನದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಪುಕ್ಕಟೆಯಾಗಿ ವಹಿಸಿಕೊಡಲಾಗಿತ್ತು. ಆದರೆ, ಉಕ್ಕು ಪ್ರಾಧಿಕಾರ ಬಂಡವಾಳ ತೊಡಗಿಸದೇ ಇರುವುದರಿಂದ ಕಾರ್ಖಾನೆ ಇಂದು ನಷ್ಟದಲ್ಲಿದೆ.
  • ಹಲವಾರು ವರ್ಷಗಳಿಂದ ವಾರ್ಷಿಕ ₹100 ಕೋಟಿ ನಷ್ಟ ಅನುಭವಿಸುತ್ತಿದ್ದ ಕಾರ್ಖಾನೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಪ್ರಯತ್ನದಿಂದಾಗಿ ನಷ್ಟ ₹35 ಕೋಟಿಗೆ ತಲುಪಿದೆ.

ಖಾಸಗೀಕರಣ ಹೆಸರಿನಲ್ಲಿ ಕಾಲಹರಣ ಬೇಡ
ಕಾರ್ಖಾನೆಯನ್ನು ಖಾಸಗೀಕರಣ ಮುಂತಾದ ವ್ಯರ್ಥ ಪ್ರಯತ್ನಗಳಲ್ಲಿ ಕಾಲಹರಣ ಮಾಡದೇ ಕೇಂದ್ರ ಸರ್ಕಾರ ಸುಮಾರು ಕನಿಷ್ಠ ₹2 ಸಾವಿರ ಕೋಟಿ ಬಂಡವಾಳ ತೊಡಗಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಚಿತ್ರಣವೇ ಬದಲಾಗಿ ಮತ್ತೆ ಗತವೈಭವವನ್ನು ಕಾಣಬಹುದಾಗಿದೆ ಎಂದು ಜಗದೀಶ್ ಅಭಿಪ್ರಾಯಪಟ್ಟರು.
ಮೇಯರ್ ಸುನೀತಾ ಅಣ್ಣಪ್ಪ, ಕಾರ್ಖಾನೆ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಬಿ.ಸಿ. ಶೈಲಶ್ರೀ, ಯು.ಎ. ಬಸಂತಕುಮಾರ್, ಕೆ.ಆರ್. ಮನು, ಎಸ್. ಮೋಹನ್, ಸದಸ್ಯರಾದ ಕೆ.ಎಂ. ಮಂಜುನಾಥ್, ಪಿ. ಕುಮಾರಸ್ವಾಮಿ, ಡಿ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.

https://suddikanaja.com/2020/11/25/protest-for-visl-bhadravathi/

Leave a Reply

Your email address will not be published. Required fields are marked *

error: Content is protected !!