Bhutan arecanut | ಭೂತಾನ್ ಅಡಿಕೆ ಆಮದಿನಿಂದ ಸ್ಥಳೀಯ ಅಡಿಕೆಗೆ ಡ್ಯಾಮೇಜ್

AAP Arecanut

 

 

HIGHLIGHTS

  • ರಾಜ್ಯ ಮತ್ತು ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದನೆ ನೀಡದಿದ್ದರೆ ಆಮ್ ಆದ್ಮಿ ಪಾರ್ಟಿಯಿಂದ ಹೋರಾಟ
  • ಭೂತಾನ್, ವಿಯೆಟ್ನಾಂ ಅಡಿಕೆ ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯ ಅಡಿಕೆ ಬೆಳೆಗಾರರ ಹಿತ ಬಲಿ

ಸುದ್ದಿ ಕಣಜ.ಕಾಂ | DISTRICT | 16 OCT 2022
ಶಿವಮೊಗ್ಗ(shivamogga): ಭೂತಾನ್ (Bhutan) ಅಡಿಕೆಗೆ ಕೇಂದ್ರ ಸರ್ಕಾರ (central government) ಮಣೆ ಹಾಕುವ ಮೂಲಕ ಸ್ಥಳೀಯ ಅಡಿಕೆ ಬೆಳೆಗಾರರ ಹಿತವನ್ನು ಬಲಿ ಕೊಡುವ ಕೆಲಸ ಮಾಡಿದೆ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಟಿ.ನೇತ್ರಾವತಿ ಆರೋಪಿಸಿದರು.

READ | ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಬಲ, ಏನಿದು ಯೋಜನೆ?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭೂತಾನ್ ನಿಂದ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಹಾಗೂ ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿದ್ದು, ಇದನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಸದ್ಯ ಕೇಂದ್ರ ಸರ್ಕಾರ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಳ್ಳಲು ತೀರ್ಮಾನಿಸಿದ್ದು, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ದೇಶೀಯ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.

ಬೇಡಿಕೆಗಳೇನು?

  • ನಮ್ಮ ದೇಶದಲ್ಲಿಯೇ ಸಾಕಷ್ಟು ಅಡಿಕೆ ಬೆಳೆದು ರಫ್ತು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನೀತಿಯಿಂದಾಗಿ ಕಡಿಮೆ ಗುಣಮಟ್ಟದ ವಿದೇಶಿ ಅಡಿಕೆಯೊಂದಿಗೆ ದೇಶೀಯ ಗುಣಮಟ್ಟದ ಅಡಿಕೆ ಮಿಶ್ರವಾಗುವುದರಿಂದ ಸ್ವದೇಶಿ ಅಡಿಕೆ ಬಗ್ಗೆ ಗ್ರಾಹಕರಲ್ಲಿ ತಪ್ಪು ಭಾವನೆ ಬರುವುದಲ್ಲದೆ, ಅಡಿಕೆ ಬೆಳೆ ಕುಸಿತ ಕಂಡು ಅಡಿಕೆ ಬೆಳೆಗಾರರು ಸಂಕಷ್ಟಕ್ಕೊಳಗಾಗಲಿದ್ದಾರೆ. ಆದ್ದರಿಂದ ಕೂಡಲೇ ಅಡಿಕೆ ಹಾಗೂ ಕಾಳುಮೆಣಸು ಆಮದು ಮಾಡಿಕೊಳ್ಳಲು ಅನುಮತಿ ನೀಡಿರುವುದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
  • ಭಾರತೀಯ ರೈತರನ್ನು ರಕ್ಷಿಸಲು ಪರಿಣಾಮಕಾರಿಯಾದ ಆಮದು ಸುಂಕ ನೀತಿ ಇಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡು ರೈತರ ಹಿತದೊಂದಿಗೆ ರಾಜೀ ಮಾಡಿಕೊಳ್ಳಲಾಗಿದೆ. ಈ ಕುರಿತು ಸಂಬಂಧಪಟ್ಟ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು.
  • ಹಳದಿರೋಗ, ಬೇರುಹುಳು ರೋಗ, ಕೊಳೆರೋಗ, ಎಲೆಚುಕ್ಕಿರೋಗದಿಂದ ರೈತರು ಸಂಕಷ್ಟಕ್ಕೊಳಗಾಗುತ್ತಿದ್ದು, ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು.
  • ಇನ್ನು ರೈತರ ಬೆಳೆ ನಾಶ ಕುರಿತಂತೆ ರಾಜ್ಯ ಸರ್ಕಾರ ತಟಸ್ಥವಾಗಿದೆ. ಕಳೆದ ಬಾರಿಯ ಬೆಳೆನಾಶದ ಪರಿಹಾರವನ್ನೇ ಸಮರ್ಪಕವಾಗಿ ವಿತರಣೆ ಮಾಡಿಲ್ಲ. ಈ ಬಾರಿ ಅತಿವೃಷ್ಟಿಯಿಂದಾಗಿ ಬಹುತೇಕ ಎಲ್ಲ ಬೆಳೆಗಾರರೂ ನಷ್ಟಕ್ಕೊಳಗಾಗಿದ್ದು, ಕೂಡಲೇ ರಾಜ್ಯ ಸರ್ಕಾರ ರೈತರ ಬೆಳೆನಾಶಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು

ಮಾಜಿ ಮೇಯರ್ ಏಳುಮಲೈ(ಕೇಬಲ್ ಬಾಬು) ಮಾತನಾಡಿ, ಹಲವಾರು ವರ್ಷಗಳಿಂದ ಹಳದಿ ರೋಗ ಹಾಗೂ ಕೊಳೆ ರೋಗದಿಂದ ಅಡಿಕೆ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಆರಂಭವಾಗಿರುವ ಎಲೆಚುಕ್ಕೆ ರೋಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರಿಂದ ಭಾರೀ ಪ್ರಮಾಣದಲ್ಲಿ ಅಡಿಕೆ ಬೆಳೆ ನಾಶವಾಗುತ್ತಿದೆ. ಸರ್ಕಾರ ಇದಕ್ಕೆ ಔಷಧಿ ಕಂಡು ಹಿಡಿಯುತ್ತಿದ್ದೇವೆಂದು ಹೇಳುತ್ತಿದೆ. ಆದರೆ ಈ ರೋಗದ ಬಗ್ಗೆ ಇನ್ನು ಅಧ್ಯಯನವೇ ನಡೆಸಿಲ್ಲ. ಸರ್ಕಾರದ ವಿಳಂಬ ನೀತಿಯಿಂದಾಗಿ ಅಡಿಕೆ ಬೆಳೆ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ ಎಂದು ಟೀಕಿಸಿದರು.

ಆಮ್ ಆದ್ಮಿ ಮುಖಂಡರಾದ ಸುರೇಶ್ ಕೋಟೆಕರ್, ರಾಘವೇಂದ್ರ ಭರದ್ವಾಜ್ ಉಪಸ್ಥಿತರಿದ್ದರು.

https://suddikanaja.com/2022/09/23/aam-aadmi-party-prithvi-reddy-spoke-with-media/

 

Leave a Reply

Your email address will not be published. Required fields are marked *

error: Content is protected !!