ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಶನಿವಾರ ಆದೇಶಿಸಲಾಗಿದೆ.
ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧಿಶರಾದ ಲತಾ ಅವರು ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.25 ಲಕ್ಷ ರೂ., ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಹಾಗೂ ಮೃತ ಬಾಲಕಿಯ ಕುಟುಂಬಸ್ಥರಿಗೆ ಪರಿಹಾರವಾಗಿ ಸರ್ಕಾರದಿಂದ 17 ಲಕ್ಷ ರೂ. ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ಮತ್ತು ಮಮತಾ ಅವರು ವಾದ ಮಂಡಿಸಿದ್ದರು.
READ | ತಿಂಗಳುಗಳೇ ಕಳೆದರೂ ನೇಮಕವಾಗದ ಅತಿಥಿ ಉಪನ್ಯಾಸಕರು! ತರಗತಿಗಳಿಗೆ ಗ್ರಹಣ
ಪ್ರಕರಣದ ಹಿನ್ನೆಲೆ
2020ನೇ ಸಾಲಿನಲ್ಲಿ ತೀರ್ಥಹಳ್ಳಿ (thirthahalli) ತಾಲ್ಲೂಕಿನ 23 ವರ್ಷದ ಯುವಕನೊಬ್ಬನು 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಇದರಿಂದ ಮನನೊಂದ ಬಾಲಕಿಯು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂದು ಮೃತ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ರಿಪ್ಪನ್ ಪೇಟೆ (ripponpet) ಠಾಣೆಯಲ್ಲಿ ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿ ಹೊಸನಗರ ವೃತ್ತ ನಿರೀಕ್ಷಕ ಬಿ.ಸಿ.ಗಿರೀಶ್ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.