ಇನ್ನಷ್ಟು ಗಂಭೀರತೆ ಪಡೆದ ಹುಣಸೋಡು ಸ್ಫೋಟ ಪ್ರಕರಣ, ಎಳೆ ಎಳೆಯಾಗಿ ನಡೆಯುತ್ತಿದೆ ಪರಿಶೀಲನೆ

 

 

ಸುದ್ದಿ ಕಣಜ.ಕಾ
ಶಿವಮೊಗ್ಗ: ಗುರುವಾರ ರಾತ್ರಿ ಸಂಭವಿಸಿದ ಭಾರೀ ಸ್ಫೋಟಕ್ಕೆ ಮಲೆನಾಡು ತತ್ತರಿಸಿದೆ. ಶುಕ್ರವಾರ ಇಡೀ ದಿನ ಈ ಬಗ್ಗೆ ಪರಿಶೀಲನೆ ಮಾಡಲಾಗಿದ್ದು, ಘಟನೆಯ ಮೂಲ ಕಾರಣ ಹುಡುಕಲಾಗುತ್ತಿದೆ.
ಇದಕ್ಕಾಗಿ ಹಟ್ಟಿ ಮೈನ್ಸ್ ತಜ್ಞರು ಹುಣಸೋಡು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಕಲ್ಲು ಗಣಿಗಾರಿಕೆಯಲ್ಲಿ ಇಷ್ಟೊಂದು ಪ್ರಮಾಣದ ಸ್ಫೋಟಕಗಳನ್ನು ತಂದಿರುವುದರ ಹಿಂದಿನ ಉದ್ದೇಶ, ಅದಕ್ಕಾಗಿ ಅವರಿಗೆ ಪರವಾನಿಗೆ ಇತ್ತೇ ಎಂಬುವುದರ ಬಗ್ಗೆ ತನಿಖೆ ನಡೆಯುತ್ತಿದೆ.
ಸ್ಫೋಟದ ಭೀಕರತೆ ಇಷ್ಟೊಂದು ತೀಕ್ಷ್ಣವಾಗಿರಬೇಕಾದರೆ ಅಲ್ಲಿದ್ದ ಸ್ಫೋಟಕಗಳು ಜಿಲೆಟಿನ್ ಆಗಿರಲು ಸಾಧ್ಯವೇ? ಇದ್ದರೂ ಎಷ್ಟು ಪ್ರಮಾಣದಲ್ಲಿದ್ದವು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.
ಹುಣಸೋಡು ಗ್ರಾಮದ ಸುತ್ತ ಈಗಲೂ ಪೊಲೀಸ್ ಸರ್ಪಗಾವಲು ಮುಂದುವರಿದಿದ್ದು, ಗಣಿಗಾರಿಕೆಯ ಮೇಲೆ ಕಣ್ಗಾವಲು ಇಡಲಾಗಿದೆ. ಸ್ಫೋಟಗೊಂಡ ಸ್ಥಳದಲ್ಲಿ ತನಿಖೆಗೆ ಅಡ್ಡಿ ಆಗಬಾರದೆಂಬ ಕಾರಣಕ್ಕೆ ಯಾರನ್ನೂ ಬಿಡುತ್ತಿಲ್ಲ. ಎಲ್ಲ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲಾಧಿಕಾರಿ, ಎಸ್.ಪಿ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಈಗಲೂ ಹುಣಸೋಡು ಸ್ಫೋಟ ಪ್ರಕರಣ ಹಲವು ಪ್ರಶ್ನೆಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಸ್ಫೋಟಕ್ಕೆ ಕಾರಣ ಇದಾಗಿರಬಹುದು, ಅದಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಆದರೆ, ಪಕ್ಕಾ ಕಾರಣವೇನು? ಎಂಬುವುದು ತಿಳಿಯಬೇಕಿದೆ.

error: Content is protected !!