ಹುಣಸೋಡು ಸ್ಫೋಟ | ಹಾನಿಗೀಡಾದವರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣದಲ್ಲಿ ಹಲವು ಮನೆಗಳಿಗೆ ಹಾನಿಯುಂಟಾಗಿದ್ದು, ಇದುವರೆಗೆ ಪರಿಹಾರ ನೀಡಿಲ್ಲ. ಕೂಡಲೇ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದು, ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಹುಣಸೋಡು, ಹೊಸೂರು, ಅಬ್ಬಲಗೆರೆ, ಬಸವನಗಂಗೂರು, ಗೆಜ್ಜೇನಹಳ್ಳಿ, ಹನುಮಂತ ನಗರ, ಜಾಕಾತಿಕೊಪ್ಪ ಸೇರಿ ಅಕ್ಕಪಕ್ಕದ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ ಎಂದು ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಹಲವು ಮನೆಗಳಲ್ಲಿ ಟಿವಿ, ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ. ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಲಕ್ಷ್ಯದಿಂದಾಗಿ ತಮ್ಮದಲ್ಲದ ತಪ್ಪಿನಿಂದ ನೂರಾರೂ ಗ್ರಾಮಸ್ಥರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ವೇದಿಕೆಯ ರಾಜ್ಯಾಧ್ಯಕ್ಷ ಗೋ.ರಮೇಶ್‍ಗೌಡ, ಸಂತೋಷ್, ದೇವೇಂದ್ರಪ್ಪ, ನಾಗರಾಜ್, ನಯನ, ಶಿವಣ್ಣ, ರಾಜು, ಲೋಕೇಶ್ ಪರಶುರಾಮಪ್ಪ, ಆಶ್ರಫ್ ಉಪಸ್ಥಿತರಿದ್ದರು.

error: Content is protected !!