ಶಿವಮೊಗ್ಗದಲ್ಲಿ ಡಿ.ಆರ್.ಡಿ.ಒ. ಸ್ಥಾಪನೆಗೆ ಒಪ್ಪಿಗೆ, ಕುವೆಂಪು ವಿವಿಗೆ ಭೇಟಿ ನೀಡಿದ ತನಿಖಾ ತಂಡ ಹೇಳಿದ್ದೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗದಲ್ಲಿ ಡಿ.ಆರ್.ಡಿ.ಒ. ಸಂಶೋಧನಾ ಘಟಕ ಸ್ಥಾಪಿಸುವ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ತನಿಖಾ ತಂಡವು ಈಗಾಗಲೇ ವರದಿ ಸಲ್ಲಿಸಿದ್ದು, ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಡಿ.ಆರ್.ಡಿ.ಒ ತಂಡದ ವಿಜ್ಞಾನಿಗಳು ಹಾಗೂ ತಂತ್ರಜ್ಞರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಜನವರಿ 5ರಂದು ನವ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅವರನ್ನು ಭೇಟಿ ಮಾಡಿ, ಸಂಶೋಧನಾ ಘಟಕದ ಜೊತೆಯಲ್ಲಿ ಡಿ.ಆರ್.ಡಿ.ಒ ಪ್ರಯೋಗಾಲಯ ಸ್ಥಾಪಿಸುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಡಿ.ಆರ್.ಡಿ.ಓ.ದ ಸೈಂಟಿಸ್ಟ್ ಮತ್ತು ಡೈರೆಕ್ಟರ್ ಜನರಲ್-ಲೈಫ್ ಸೈನ್ಸ್ ಡಾ. ಎ.ಕೆ. ಸಿಂಗ್ ನೇತೃತ್ವದ ತಂಡ ಕುವೆಂಪು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಪ್ರಸ್ತುತಪಡಿಸಿದ ಡಾಕ್ಯುಮೆಂಟರಿಯನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಡಿ.ಆರ್.ಡಿ.ಒ ನಿರ್ದೇಶಕ ದೇವಕಾಂತ್ ಪಹಾಡ್ ಸಿಂಗ್ ಅವರು ಡಿ.ಆರ್.ಡಿ.ಒ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿ ಮಾಹಿತಿ ನೀಡಿದರು ಎಂದು ಸಂಸದರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಡಿ.ಆರ್.ಡಿ.ಒ. ಸ್ಥಾಪನೆಗೆ ಇರುವ ಪರಿಸರ, ಸಾರಿಗೆ, ರೈಲ್ವೆ, ವೈಮಾನಿಕ ಸಂಪರ್ಕ, ಪಶ್ಚಿಮ ಘಟ್ಟಗಳಲ್ಲಿ ದೊರೆಯುವ ನೈಸರ್ಗಿಕ ಗಿಡಮೂಲಿಕೆಗಳು, ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿ, ಲಭ್ಯವಿರುವ ಕಾಲೇಜುಗಳು ಹೀಗೆ ಎಲ್ಲ ಅನುಕೂಲಗಳ ಬಗ್ಗೆ ಮತ್ತು ಡಿ.ಆರ್.ಡಿ.ಒ ಸ್ಥಾಪನೆಯಿಂದಾಗಿ ಜಿಲ್ಲೆಗೆ ಆಗುವ ಅನುಕೂಲಗಳ ಕುರಿತು ತನಿಖಾ ತಂಡಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದರು.
ಶಿವಮೊಗ್ಗದಲ್ಲಿ ಡಿ.ಆರ್.ಡಿ.ಒ. ಪ್ರಯೋಗಾಲಯವನ್ನು ಸ್ಥಾಪಿಸುವ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಚರ್ಚಿಸಿದ ಅವರು, ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.ಆರ್.ಡಿ.ಓ.ಘಟಕ ಸ್ಥಾಪಿಸಲು ಡಿ.ಆರ್.ಡಿ.ಓ.ದ ತಾಂತ್ರಿಕ ತಂಡವು ಈ ಹಿಂದೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆದರೆ ಏರೋನಾಟಿಕ್ಸ್, ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ಯುದ್ಧ ವಾಹನಗಳು, ಎಂಜಿನಿಯರಿಂಗ್ ವ್ಯವಸ್ಥೆಗಳು, ಸಲಕರಣೆಗಳು, ಕ್ಷಿಪಣಿಗಳು, ಸುಧಾರಿತ ಕಂಪ್ಯೂಟಿಂಗ್ ಮತ್ತು ಸಿಮ್ಯುಲೇಶನ್, ವಿಶೇಷ ವಸ್ತುಗಳು, ನಾಕಾ ವ್ಯವಸ್ಥೆಗಳಂತ ವಿವಿಧ ವಿಭಾಗಗಳನ್ನು ಒಳಗೊಂಡ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತಹ ಹಲವಾರು ಕಾರ್ಯಗಳನ್ನು ಡಿ.ಆರ್.ಡಿ.ಒ. ಘಟಕವು ನಿರ್ವಹಿಸುತ್ತದೆ. ಪ್ರಯುಕ್ತ ಶಿವಮೊಗ್ಗದಲ್ಲಿ ಉದ್ದೇಶಿತ ಸಂಶೋಧನಾ ಕೇಂದ್ರದ ಬದಲಾಗಿ ಸುಸಜ್ಜಿತ ಮತ್ತು ಸ್ವತಂತ್ರವಾಗಿರುವ ಡಿ.ಆರ್.ಡಿ.ಒ ಪ್ರಯೋಗಾಲಯವನ್ನು ಸ್ಥಾಪಿಸುವಂತೆ ಒತ್ತಾಯಿಸಿದರು.
ಪೂರಕ ಅಂಶ ಇಲ್ಲಿದೆ | ಡಿ.ಆರ್.ಡಿ.ಒ ಕೇಂದ್ರ ಕಚೇರಿಯ ನಿರ್ದೇಶಕ ಕೆ.ಕೆ. ಪಾಟಕ್ ಮಾತನಾಡಿ, ಡಿ.ಆರ್.ಡಿ.ಓ.ಘಟಕಗಳು ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಸೈನಿಕರ ಶ್ರೆಯೋಭಿವೃದ್ಧಿಗೆ ಕಂಕಣಬದ್ಧವಾಗಿವೆ. ಅತೀ ಚಳಿಯಲ್ಲಿ, ಅತೀ ಹಿಮದ ಮಳೆಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಒದಗಿಸಬಹುದಾದ ಸೌಲತ್ತುಗಳ ಬಗ್ಗೆ, ಅವರ ಆಹಾರದ ಬಗ್ಗೆ, ಅವರ ಉಡುಗೆ, ತೊಡುಗೆ, ಆಯುಧಗಳ ನಿರ್ವಹಣೆ, ಗಡಿ ಪ್ರದೇಶದ ಜನರ ಬದುಕು, ಕೃಷಿ ಚಟುವಟಿಕೆಗಳು, ರಕ್ಷಣಾ ಇಲಾಖೆಯ ತಾಂತ್ರಿಕ ಅಭಿವೃದ್ಧಿ, ನೀರಿನಾಳದಲ್ಲಿ ನಿರ್ವಹಿಸುವ ರಕ್ಷಣಾ ಪಡೆಗಳು, ಸಬ್‍ಮೆರಿನ್‍ಗಳ ಅಭಿವೃದ್ಧಿ, ದೇಶದಲ್ಲಿನ ಸ್ವಚ್ಛತೆ, ಸ್ವಾಸ್ತ್ಯ ಭಾರತ (ಆರೋಗ್ಯ), ಬಯೋ ಟಾಯ್ಲೆಟ್ ಅಭಿವೃದ್ಧಿ, ಸ್ಕಿಲ್ ಇಂಡಿಯಾ ಮೂಲಕ ಸ್ವಯಂ ಉದ್ಯೋಗ ತರಬೇತಿ, ಮೇಕ್ ಇನ್ ಇಂಡಿಯಾ ಮೂಲಕ ಸ್ಥಳೀಯ ಉತ್ಪಾದನಾ ಅಭಿವೃದ್ಧಿ, ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದಂತಹ ಎಚ್ಚರಿಕೆ ಕ್ರಮಗಳು, ಹೀಗೆ ಪ್ರತಿಯೊಂದು ಕ್ಷೇತ್ರಗಳ ಕುರಿತು ಸಂಶೋಧನೆ ನಡೆಸುವಂತಹ ಕಾರ್ಯವನ್ನು ಡಿ.ಆರ್.ಡಿ.ಓ. ಮಾಡುತ್ತಿದ್ದು, ಇದಕ್ಕೆ ಸಹಕಾರಿಯಾಗುವಂತಹ ಪೂರಕ ವಾತಾವರಣ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಲಭ್ಯತೆ ಇರುವುದನ್ನು ಗಮನಿಸಿರುವುದಾಗಿ ತಿಳಿಸಿದರು.
ಡಿ.ಇ.ಬಿ.ಇ.ಎಲ್ ನಿರ್ದೇಶಕರಾದ ಡಾ. ಮಣಿಮೋಜಿ ತಿಯೋದರೆ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಜಿ.ಪಂ. ಸದಸ್ಯರಾದ ವೀರಭದ್ರಪ್ಪ ಪೂಜಾರ್, ಉಪಸ್ಥಿತರಿದ್ದರು.

error: Content is protected !!