ಭದ್ರಾವತಿಯಲ್ಲಿ ಸಿಕ್ತು ಕ್ರಿಸ್ತ ಪೂರ್ವ 2500 ವರ್ಷ ಹಳೆಯ ಶಿಲಾ ಆಯುಧ!

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ಕಸಬಾ ಕಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್ 91ರಲ್ಲಿ ಕ್ರಿಸ್ತ ಪೂರ್ವ 2500 ರಿಂದ 1800 ವರ್ಷಗಳಷ್ಟು ಪುರಾತನವಾದ ನೂತನ ಶಿಲಾಯುಗದ ಶಿಲಾ ಆಯುಧವೊಂದು ಪತ್ತೆಯಾಗಿದೆ.

READ | ಇನ್ಮುಂದೆ ದಿನದ 24 ಗಂಟೆ ಶಿವಮೊಗ್ಗದಲ್ಲಿ ನಡೆಯಲಿದೆ ಕೊರೊನಾ ಟೆಸ್ಟ್, 2ನೇ ಅಲೆಗೆ ಸಿದ್ಧತೆ ಜೋರು, ಬರಲಿವೆ ಹೆಚ್ಚುವರಿ ಆಂಬ್ಯುಲೆನ್ಸ್

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಕೆ.ಆರ್.ವೆಂಕಟೇಶ ಎಂಬುವವರ ತೋಟದ ಬಸವೇಶನ ಮಟ್ಟಿ ಎಂಬಲ್ಲಿ ಶಿಲಾಯುಧ ಪತ್ತೆಯಾಗಿದೆ.
ಸಿಕ್ಕಿದ್ದು ಹೇಗೆ | ಇದೇ ಜಾಗದಲ್ಲಿ ಕೆಲವು ವರ್ಷಗಳ ಹಿಂದೆ ಸ್ವಚ್ಛತೆ ಮಾಡುವಾಗ ಶಿಲಾಯುಧ, ಕೈಬಾಚಿ (ಶಿಲೆಯಿಂದ ಮಾಡಿದ) ಹಾಗೂ ಮಡಿಕೆಯ ಚೂರುಗಳು ಕಂಡುಬಂದಿದ್ದವು. ಆದರೆ, ಇವುಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದೇ ಮಡಿಕೆಯ ಚೂರುಗಳು, ಕೂಬಾಚಿಯನ್ನು ಮಣ್ಣಲ್ಲಿ ಹಾಕಲಾಗಿದೆ. ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಕುಳಿಗಳನ್ನು ಅಗೆದು ಕುರುಹುಗಳೂ ಇವೆ. ಆದರೆ, ಪ್ರಸ್ತುತ ಶಿಲಾಯುಧ ಮಾತ್ರ ದೊರೆತಿದೆ.
ಕಪ್ಪು ಡೈಕ್ ಶಿಲೆಯಿಂದ ಮಾಡಿದ್ದು 17 ಸೆಂ.ಮೀ. ಉದ್ದ, 6 ಸೆಂ.ಮೀ. ಅಗಲವಾಗಿದ್ದು, ಗೆಡ್ಡೆ ಗೆಣಸು ಅಗೆಯಲು, ಕತ್ತರಿಸಲು ಉಪಯೋಗಿಸಿದ ಕೈಗೊಡಲಿಯಾಗಿದೆ. ಇದಕ್ಕೆ ಕಟ್ಟಿಗೆಯನ್ನು ಕಟ್ಟಿ ಕೊಡಲಿಯಂತೆ ಬಳಸಲಾಗುತಿತ್ತು ಎಂಬುವುದನ್ನೂ ಕಾಣಬಹುದು. ಈ ನೆಲೆಯ ಹತ್ತಿರ ಹರಿಯುತ್ತಿದ್ದ ಕೊಕಿನ ಕಲ್ಲು ಹಳ್ಳವನ್ನು ಇಮದು ಮುಚ್ಚಲಾಗಿದೆ. ಶಿಲಾಯುಗದ ಮಾನವ ವಾಸ ಮಾಡುತ್ತಿದ್ದ ಕಲ್ಲನ ಗುಡ್ಡ ಅಲ್ಲಿದ್ದು, ಈಗದು ಸಹ ಇಲ್ಲದಂತಾಗಿದೆ.
ಇದುವರೆಗೆ 27 ನೂತನ ಶಿಲಾಯುಗದ ನೆಲೆಗಳು ಪತ್ತೆ | ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲಿಯವರೆಗೆ 27 ನೂತನ ಶಿಲಾಯುಗದ ನೆಲೆಗಳು ಕಂಡುಬಂದಿವೆ. ಅದರಲ್ಲಿ ಭದ್ರಾವತಿ ತಾಲೂಕಿನಲ್ಲಿ 10 ನೆಲೆಗಳು ಕಂಡುಬಂದಿವೆ. ಅವುಗಳಲ್ಲಿ ಆನವೇರಿ, ಅಶೋಕನರ, ನಾಗಸಮುದ್ರ, ನಿಂಬೇಗೊಂದಿ, ಭಗವತಿಕೆರೆ, ಮತಿಘಟ್ಟ, ವಡೇರಪುರ, ಸಿಂಗನಮನೆ, ಗೋಣಿಬೀಡು, ಬಿ.ಆರ್.ಪ್ರಾಜೆಕ್ಟ್ ನೆಲೆಗಳು ಪ್ರಮುಖವಾಗಿವೆ.
ಶಿಲಾಯುಧವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಜೆ.ಡಿ.ಯು ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಗೌಡ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ್ ಅವರಿಗೆ ಶೇಜೇಶ್ವರ್ ಅಭಿನಂದಿಸಿದ್ದಾರೆ.

https://www.suddikanaja.com/2021/01/14/rashtrakutas-sculpture-found-in-shiralakoppa/

error: Content is protected !!