ಕೊರೊನಾ ಹೈ ಅಲರ್ಟ್ | ಮೆಗ್ಗಾನ್ ಆಸ್ಪತ್ರೆಯ ವಾರ್ಡ್ ಗಳಲ್ಲಿ ವೈದ್ಯರ ಹೆಸರು ಪ್ರಕಟ, ಕರ್ತವ್ಯ ಲೋಪ ಎಸಗಿದರೆ ಕ್ರಮ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸದ್ಯಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ವೈದ್ಯರ ಕೊರತೆ ಆಗಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಕೋವಿಡ್ ನಿರ್ವಹಣೆ ಪರಿಶೀಲನೆ ನಡೆಸಿದರು.

https://www.suddikanaja.com/2021/04/04/elephant-attack-on-doctor-at-sakrebailu-elephant-camp/

ಲಭ್ಯವಿರುವ ನರ್ಸ್ ಗಳಿಂದ ಸಮರ್ಪಕವಾದ ಸೇವೆಯನ್ನು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಿಮ್ಸ್ ನ ವಿವಿಧ ವಿಭಾಗಗಳ ಮುಖ್ಯಸ್ಥರು ಕಡ್ಡಾಯವಾಗಿ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗಬೇಕು. ವಿವಿಧ ವಾರ್ಡ್‍ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ವೈದ್ಯರ ಹೆಸರನ್ನು ಆಯಾ ವಾರ್ಡ್ ಹೊರಗೆ ಪ್ರತಿದಿನ ಪ್ರಕಟಿಸಬೇಕು. ಕರ್ತವ್ಯ ಲೋಪ ಎಸಗುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದರು.
ಜಿಪಂ ಸಿಇಒಗೆ ಸೂಚನೆ‌ | ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ನರ್ಸ್ ಗಳ ಸಮರ್ಪಕ ನಿರ್ವಹಣೆ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚನೆ ನೀಡಲಾಗಿದೆ. ಇದೇ ರೀತಿ ಕರ್ತವ್ಯಕ್ಕೆ ನಿಯೋಜಿಸಲಾಗುವ ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರತಿ ದಿನ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ಆದೇಶವನ್ನು ಉಲ್ಲಂಘಿಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಲಸಿಕೆ ನೀಡುವ ವ್ಯವಸ್ಥೆಯನ್ನು ಸರಿಪಡಿಸಬೇಕು. ಲಸಿಕಾ ಕೇಂದ್ರಗಳ ಮುಂದೆ ಈಗಾಗಲೇ ಜನರು ಸಾಲುಗಟ್ಟಿ ನಿಲ್ಲುತ್ತಿದ್ದು, ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ತಕ್ಷಣ ಸರಿಪಡಿಸಬೇಕು
ಪ್ರಸನ್ನ ಕುಮಾರ್, ವಿಧಾನ ಪರಿಷತ್ ಸದಸ್ಯ

ಕೋವಿಡ್ ಫಲಿತಾಂಶ ಬೇಗ ಕೊಡಿ | ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಕೋವಿಡ್ ಪರೀಕ್ಷಾ ಫಲಿತಾಂಶ ವಿಳಂಬ ಆಗುತ್ತಿರುವ ಕಾರಣ ಸಕಾಲದಲ್ಲಿ ಚಿಕಿತ್ಸೆ ಆರಂಭಿಸಲು ತೊಡಕಾಗುತ್ತಿದೆ. ಕೋವಿಡ್ ರೋಗಿಗಳ ವಾರ್ಡ್ ಗೆ ಅವರ ಸಂಬಂಧಿಕರು ಯಾವುದೇ ಸುರಕ್ಷತಾ ಕಿಟ್ ಧರಿಸದೆ ನೇರವಾಗಿ ತೆರಳಲು ಅವಕಾಶ ನೀಡಬಾರದು. ಪಾಸಿಟಿವ್ ಬಂದ ವ್ಯಕ್ತಿಗಳ ಹೋಮ್ ಐಸೋಲೇಷನ್ ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಮೇಯರ್ ಸುನೀತಾ ಅಣ್ಣಪ್ಪ ಉಪಸ್ಥಿತರಿದ್ದರು.

https://www.suddikanaja.com/2021/02/10/order-for-investigation-of-nirantara-jyoti-scheme-implementation-in-shivamogga/

error: Content is protected !!