ಸಂಸದರ ಮನೆಗೆ ಮುತ್ತಿಗೆ, 75ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಬಂಧನ, ಹೋರಾಟಕ್ಕೇನು ಕಾರಣವೇನು?

 

 

ಸುದ್ದಿ‌ ಕಣಜ.ಕಾಂ | SHIVAMOGGA | POLITICS
ಶಿವಮೊಗ್ಗ: ವಿನೋಬನಗರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಈ ವೇಳೆ, ಪೊಲೀಸರು ಮುಂಜಾಗ್ರತಾ ಕ್ರಮವಾಗಿ 75ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಟ್ಟರು.
ರೈತರ, ಕಾರ್ಮಿಕರು ಹಾಗೂ ಶ್ರೀಸಾಮಾನ್ಯ ವಿರೋಧಿ ಕೇಂದ್ರ ಸರ್ಕಾರವನ್ನು ವಿರೋಧಿಸಿ ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ದನಿ‌ ಎತ್ತದ ಸಂಸದರ ನಡೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುತಿದ್ದು, ಅದರ ಭಾಗವಾಗಿಯೇ ಶಿವಮೊಗ್ಗದಲ್ಲಿ ಸಂಸದರ ಮನೆಗೆ ಮುತ್ತಿಗೆ ಹಾಕಲಾಯಿತು.

ಹೆಚ್ಚುತ್ತಿದೆ ತೈಲ, ಅಗತ್ಯ ವಸ್ತುಗಳ ಬೆಲೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನೆರೆ ಪರಿಹಾರ‌ ಲಭಿಸಿಲ್ಲ. ರಾಜ್ಯಕ್ಕೆ ಬರಬೇಕಾದ ಜಿ.ಎಸ್.ಟಿ ಪಾಲು ನೀಡಿಲ್ಲ, ಕೊರೊನಾ ನಿರ್ವಹಣೆ ಮತ್ತು ಲಸಿಕೆ ನೀಡುವಲ್ಲಿ‌ ಸರ್ಕಾರ ವಿಫಲವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಕೂಡಲೇ ರಾಷ್ಟ್ರಪತಿಗಳು ಜನ ವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಯುವ ಕಾಂಗ್ರೆಸ್ ಆರೋಪಗಳೇನು?
  1. ದೇಶದಲ್ಲಿ ಅಚ್ಚೆ ದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಬಿಜೆಪಿ ಅವಧಿಯಲ್ಲಿ ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಇದಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆಯೇ ಕಾರಣ
  2. ಜನ ಮತ್ತು ರೈತ ವಿರೋಧಿ‌ ಕಾನೂನುಗಳ‌ ಮೂಲಕ ಖಾಸಗೀಕರಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ.
  3. ಪೆಗಸಿಸ್ ಮೂಲಕ ದೂರವಾಣಿ ಸಂಭಾಷಣೆ ಕದ್ದಾಲಿಕೆಯಲ್ಲಿ ನೇರವಾಗಿ ಕೇಂದ್ರ ಸರ್ಕಾರ ಶಾಮೀಲು ಆಗಿದೆ.
  4. ಅವೈಜ್ಞಾನಿಕ, ರೈತ ವಿರೋಧಿ ನೀತಿಗಳು ಜಾರಿಗೆ ತರಲು ಹೊರಟರೂ ರಾಜ್ಯದ 25 ಬಿಜೆಪಿ ಸಂಸದರು ಕರ್ನಾಟಕದ ಪರವಾಗಿ ಧ್ವನಿ ಎತ್ತುವಲ್ಲಿ ವಿಫಲ

ಪ್ರತಿಭಟನೆಯ ನೇತೃತ್ವವನ್ನು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್ ವಹಿಸಿದ್ದರು. ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ , ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ರಮೇಶ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಎ ಸ್. ರವಿ ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೇಶ್, ರೇಖಾ ರಂಗನಾಥ್, ಪ್ರಮುಖರಾದ ಬಿ.ಲೋಕೇಶ್, ಈ.ಟಿ.ನಿತಿನ್ , ಎಸ್.ಕುಮರೇಶ್, ವಿನೋದ್ ಕುಮಾರ್, ಅಫ್ತಾಬ್ ಅಹ್ಮದ್, ನಯಾಜ್, ಟಿ.ವಿ. ರಂಜಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

https://www.suddikanaja.com/2020/12/01/shivamogga-youth-congress-protest-against-kuvempu-university/

error: Content is protected !!