ಬೆಂಕಿ ಕೆನ್ನಾಲಿಗೆ ಬೆಚ್ಚಿಬಿದ್ದ ಬೆಂಗಳೂರು, 30 ಅಡಿ ಆಕಾಶಕ್ಕೆ ಚಿಮ್ಮಿದ ಬ್ಯಾರೆಲ್!

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಹೊಸಗುಡ್ಡದಹಳ್ಳಿಯಲ್ಲಿ ಕೆಮಿಕಲ್ ಫ್ಯಾಕ್ಟರಿಯ ಗೋದಾಮಿನಲ್ಲಿ ಮಂಗಳವಾರ ಅಗ್ನಿ ದುರಂತ ಸಂಭವಿಸಿದೆ. ಈ ದುರಂತದ ಕುರುಹು ಕಿ.ಮೀ. ಕಾಣುತಿತ್ತು. ಅಕ್ಷರಶಃ ಆಕಾಶವೇ ಕಾಣದಷ್ಟು ದಟ್ಟ ಹೊಗೆ ಅಲ್ಲಿ ಆವರಿಸಿತ್ತು. ಕಾರ್ಖಾನೆಯಿಂದ 30 ಅಡಿವರೆಗೆ ಬ್ಯಾರೆಲ್ ಗಳು ಆಕಾಶಕ್ಕೆ ಚಿಮ್ಮಿವೆ. ಇಂತಹ ದೊಡ್ಡ ಅಗ್ನಿ ಅವಘಡ ಸಂಭವಿಸಿದರೂ ಅದೃಷ್ಟವಷಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಬೆಂಕಿ ಆವರಿಸುವ ಮುನ್ನವೇ ಗೋದಾಮು ಅಕ್ಕಪಕ್ಕದಲ್ಲಿ ವಾಸವಾಗಿದ್ದ ಜನ ಮನೆಯಿಂದ ಹೊರಬಂದಿದ್ದ ಪರಿಣಾಮ ಆಗಬಹುದಿದ್ದ ಭಾರಿ ದೊಡ್ಡ ದುರಂತ ಕೂದಲೆಳೆಯಲ್ಲಿ ತಪ್ಪಿದೆ.
* ಗಾಯಗೊಂಡವರಿವರು: ಉತ್ತರ ಭಾರತ ಮೂಲದ ಕಾರ್ಮಿಕ ಬಿಜುಸಿಂಗ್ ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿರೇವಣಸಿದ್ದಪ್ಪ, ಸಂಪತ್ ರಾಜ್, ಸಿದ್ದೇಗೌಡ ಇತರರಿಗೆ ಗಾಯಗಳಾಗಿವೆ. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
* ಘಟನೆಗೆ ಕಾರಣವೇನು: ಸುತ್ತಲೂ ಮನೆಗಳಿದ್ದು, ಬಡಾವಣೆಯಲ್ಲಿ ಇಂತಹ ದೊಡ್ಡ ಅನಾಹುತ ಸಂಭವಿಸಲು ಕಾರಣ ಹೊಸಗುಡ್ಡದಹಳ್ಳಿಯ ಕುವೆಂಪುನಗರದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯ ಗೋದಾಮು. ಸ್ಯಾನಿಟೈಸರ್ ಸೇರಿ ಇನ್ನಿತರ ದ್ರಾವಣಗಳನ್ನು ತಯಾರಿಸುವುದಕ್ಕಾಗಿ ಅಗತ್ಯವಿರುವ ಕಚ್ಚಾ ರಾಸಾಯನಿಕ ಪದಾರ್ಥಗಳನ್ನು ಗೋದಾಮಿನಲ್ಲಿ ಶೇಖರಣೆ ಮಾಡಲಾಗಿತ್ತು.
ಬೆಳಗ್ಗೆ 10.30ರ ಸುಮಾರಿಗೆ ಕೆಲವು ಕಾರ್ಮಿಕರು ಕೆಮಿಕಲ್ ಬ್ಯಾರೆಲ್ ಗೋದಾಮಿನಲ್ಲಿಟ್ಟು ಹೋಗಿದ್ದಾರೆ. ಅದಾದ ಕೆಲವೆ ಹೊತ್ತಲ್ಲಿ ಅಂದರೆ, 11.15ರ ಸುಮಾರಿಗೆ ಗೋದಾಮು ಮುಂಭಾಗದ ಗೇಟ್ ಸಮೀಪ ಕೆಮಿಕಲ್ ಸೋರಿಕೆ ಆಗಿದೆ. ಇಲ್ಲಿ ಹೊತ್ತಿಕೊಂಡ ಬೆಂಕಿ ಇಡೀ ಗೋದಾಮಿಗೆ ಆವರಿಸಿದೆ. ಗೋದಾಮಿನಲ್ಲಿ 1 ಸಾವಿರಕ್ಕೂ ಹೆಚ್ಚು ಬ್ಯಾರೆಲ್‌ಗಳಿದ್ದವು ಎನ್ನಲಾಗಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಇತರರು ಹರಸಾಹಸವನ್ನೇ ಪಟ್ಟಿದ್ದಾರೆ. ಬೆಳಗ್ಗೆ ಶುರುವಾದ ಕಾರ್ಯಾಚರಣೆ ಸಂಜೆಯಾದರೂ ನಡೆಯುತ್ತಿತ್ತು. ಬೆಂಕಿ ನಂದಿಸಲು 200ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಮತ್ತು 20 ವಾಹನಗಳಿಂದ ಬೆಂಕಿ ನಂದಿಸಲಾಯಿತು.

Leave a Reply

Your email address will not be published. Required fields are marked *

error: Content is protected !!