ಕುವೆಂಪು ವಿವಿ ಕುಲಪತಿ ಸುದ್ದಿಗೋಷ್ಠಿ ಸಾರಾಂಶ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಪತ್ರಿಕಾ ಭವನದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿ ಕರೆದಿದ್ದರು. ಅದರಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯ ಸಹ್ಯಾದ್ರಿ ಕಾಲೇಜಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿದರು.
ನವೆಂಬರ್ 29ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹ್ಯಾದ್ರಿ ಕಾಲೇಜಿನ ವಿಸ್ತರಣ ಕಟ್ಟಡ, ಪ್ರವೇಶ ದ್ವಾರ ಮತ್ತು ವಿದ್ಯಾರ್ಥಿ ನಿಲಯ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.
ಕಾಲೇಜು ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕೆ.ಎಸ್.ಈಶ್ವರಪ್ಪ, ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ, ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಸಂಸದ ಬಿ.ವೈ.ರಾಘವೇಂದ್ರ, ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಇತರರು ಉಪಸ್ಥಿತರಿರಲಿದ್ದಾರೆ.
ಆರೂವರೆ ಕೋಟಿ ವೆಚ್ಚದಲ್ಲಿ ಇನ್ನಷ್ಟು ಸುಂದರವಾಯ್ತು ಕ್ಯಾಂಪಸ್: ಅಂದಾಜು 6.50 ಕೋಟಿ ರೂ. ವೆಚ್ಚದಲ್ಲಿ ಸಹ್ಯಾದ್ರಿ ಕಾಲೇಜಿನ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾಲೇಜಿನ ಪ್ರವೇಶದ್ವಾರದ 2.50 ಲಕ್ಷ ರೂ. ವೆಚ್ಚವನ್ನು ವಿಶ್ವವಿದ್ಯಾಲಯ ನೀಡಿದೆ ಎಂದು ಹೇಳಿದರು.
ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷ ಪದವಿಗೆ 1000ಕ್ಕೂ ಅಧಿಕ ಜನ ಕೇವಲ ವಿಜ್ಞಾನ ವಿಭಾಗಕ್ಕೆ ಅರ್ಜಿ ಹಾಕಿದ್ದಾರೆ. ಈಗಾಗಲೇ ಮೂರು ಸಾವಿರ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸರ್ಕಾರದ ನಿರ್ದೇಶನದಂತೆ ಅಂತಿಮ ವರ್ಷದವರಿಗಾಗಿ ಕ್ಲಾಸ್ ಗಳನ್ನು ಆರಂಭಿಸಲಾಗಿದೆ. ಆದರೆ, ಶೇ.15ರಷ್ಟು ಮಾತ್ರ ವಿದ್ಯಾರ್ಥಿಗಳು ಹಾಜರು ಆಗಿದ್ದಾರೆ. ವಿದ್ಯಾರ್ಥಿಗಳ ವಸತಿ ನಿಲಯ ಖಾಲಿ ಇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುವೆಂಪು ವಿವಿಯ ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್, ಸಹ್ಯಾದ್ರಿ ಕಾಲೇಜಿನ ಮೂರು ವಿಭಾಗದ ಪ್ರಾಂಶುಪಾಲರಾದ ಡಾ.ಕೆ.ಆರ್.ಶಶಿರೇಖಾ, ಡಾ.ಎಚ್.ಎಂ.ವಾಗ್ದೇವಿ, ಡಾ.ಕೆ.ಬಿ.ಧನಂಜಯ್, ಸಿಂಡಿಕೇಟ್ ಸದಸ್ಯರಾದ ಬಳ್ಳೆಕೆರೆ ಸಂತೋಷ್, ಕಿರಣ್ ದೇಸಾಯಿ, ರಮೇಶ್ ಬಾಬು, ರಾಮಲಿಂಗಪ್ಪ, ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯದಲ್ಲಿರುವ ಇನ್ನುಳಿದ ಹಳೆಯ ವಿಶ್ವವಿದ್ಯಾಲಯಗಳಿಗೆ ಹೋಲಿಸಿದ್ದಲ್ಲಿ ಕುವೆಂಪು ವಿವಿ ಮುಖ್ಯವಾಹಿನಿಯಲ್ಲಿದೆ. ಸರ್ವತೋಮುಖವಾಗಿ ಅಭಿವೃದ್ಧಿಯಾಗುತ್ತಿದೆ. ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕರ ಶ್ರಮದ ಫಲವಾಗಿ ಸಾಧ್ಯವಾಗಿದೆ.
– ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಪತಿ, ಕುವೆಂಪು ವಿವಿ, ಶಿವಮೊಗ್ಗ

Leave a Reply

Your email address will not be published. Required fields are marked *

error: Content is protected !!