ರೈತರ ಸಾಲ ಮನ್ನಾ ಬಾಕಿ ಹಣ ಎಷ್ಟಿದೆ ಗೊತ್ತಾ?, ಪಿಐಎಲ್ ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೈತ್ರಿ ಸರ್ಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿದ್ದ ಸಾಲ ಮನ್ನಾ ಹಣ ಇದುವರೆಗೆ ಬಿಡುಗಡೆಯಾಗಿಲ್ಲ. ಇದರಿಂದ ರೈತರಿಗೆ ಭಾರಿ ಸಮಸ್ಯೆಯಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 1.22 ಲಕ್ಷ ರೈತರಿಗೆ 350 ಕೋಟಿ ರೂ. ಹಣ ಕೊಡುವುದು ಬಾಕಿ ಇದೆ. ಇದರಲ್ಲಿ 65 ಸಾವಿರ ರೈತರ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಎಲ್ಲವೂ ಸರಿಯಾಗಿದ್ದು, ಹೊಂದಾಣಿಕೆ ಕೂಡ ಆಗಿದೆ. ಇವರಿಗೆ 200 ಕೋಟಿ ರೂಪಾಯಿ ಬಿಡುಗಡೆ ಆಗಬೇಕಿದೆ ಎಂದು ಹೇಳಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಆದೇಶವನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ, ಬಾಕಿ ಹಣ ಬಿಡುಗಡೆ ಮಾಡಬೇಕು. ಈ ಮೂಲಕ ರೈತರನ್ನು ಸಾಲಮುಕ್ತರಾಗಿಸಬೇಕು. ಇದಕ್ಕೆ ತಪ್ಪಿದರೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವದು.
– ಎಚ್.ಆರ್. ಬಸವರಾಜಪ್ಪ, ಗೌರವಾಧ್ಯಕ್ಷರು, ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ

ಇನ್ನುಳಿದ 57 ಸಾವಿರ ರೈತರ ಬ್ಯಾಂಕ್ ಖಾತೆ ನಂಬರ್, ಆಧಾರ್, ಪಹಣಿಯಲ್ಲಿ ನ್ಯೂನತೆ ಇರುವುದರಿಂದ ಆ ಸಮಸ್ಯೆಗಳನ್ನು ನೀಗಿಸಿ 150 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದಲ್ಲಿ 18.35 ಕೋಟಿ ರೂ. ಬಾಕಿ: ಜಿಲ್ಲೆಯಲ್ಲಿ 3,120 ರೈತರಿಗೆ 18.35 ಕೋಟಿ ರೂಪಾಯಿ ಬಿಡುಗಡೆ ಆಗಬೇಕಿದೆ. ರೈತರು ಅತಿವೃಷ್ಟಿ, ಅನಾವೃಷ್ಟಿಯಲ್ಲಿ ಬೆಳೆ ನಷ್ಟದಲ್ಲಿದ್ದಾರೆ. ಇದರಿಂದಾಗಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಬಡ್ಡಿ ಕಟ್ಟುವ ಸ್ಥಿತಿ: ಸಾಲ ಮನ್ನಾದ ಹಣ ಖಾತೆಗೆ ಬಂದಿಲ್ಲ. ಇದರಿಂದಾಗಿ, ರೈತರ ಖಾತೆಗಳು ಸುಸ್ತಿಯಾಗಿವೆ. ಹೊಸ ಸಾಲ ಕೂಡ ಸಿಗುತ್ತಿಲ್ಲ. ಶೂನ್ಯ ಬಡ್ಡಿಗೆ ಬದಲಾಗಿ ಶೇ.15 ರಷ್ಟು ಬಡ್ಡಿ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು

ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಡಾ.ಚಿಕ್ಕಸ್ವಾಮಿ, ಪಿ.ಶೇಖರಪ್ಪ, ಸಿ.ಚಂದ್ರಪ್ಪ, ಡಿ.ಎಚ್. ರಾಮಚಂದ್ರಪ್ಪ, ಈಶಣ್ಣ ಅರಬಿಳಚಿ, ಕೆ. ರಾಘವೇಂದ್ರ ಉಪಸ್ಥಿತರಿದ್ದರು.

error: Content is protected !!