ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹುಣಸೋಡು ಸ್ಫೋಟದ ಪ್ರಕರಣವನ್ನು ಪೊಲೀಸರು ಸರಿಯಾದ ದಿಸೆಯಲ್ಲಿಯೇ ತನಿಖೆ ನಡೆಸುತ್ತಿದ್ದಾರೆ. ಮೊದಲ ಹಂತದ ತನಿಖೆ ನಂತರ ಅನಿವಾರ್ಯವಾದರೆ, ಎನ್.ಐ.ಎ ತನಿಖೆಗೆ ಸೂಚನೆ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಅಧಿವೇಶನದಲ್ಲಿ ಮಾತನಾಡಿ, ಪ್ರಕರಣ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಜಿಲೆಟಿನ್ ಮೂಲವನ್ನು ಹುಡುಕಲಾಗುತ್ತಿದೆ. ತುಂಗಾನಗರದಲ್ಲಿ ಸಿಕ್ಕ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಚಿವರ ಉತ್ತರ ಸಮಾಧಾನ ತಾರದೇ ಇದ್ದುದ್ದರಿಂದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಪ್ರಕರಣ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಹುಣಸೋಡು ಸ್ಫೋಟ ಪ್ರಕರಣ ಭಾರಿ ಗಂಭೀರ ಸ್ವರೂಪ ತಾಳಿದೆ.