ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿಜಯಪುರ ವಿಮಾನ ನಿಲ್ದಾಣದಿಂದ ಬರುವ ದಿನಗಳಲ್ಲಿ ಉಡಾನ್ ಯೋಜನೆ ಅಡಿ ಸೇರ್ಪಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸೋಮವಾರ 220 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ವಿಮಾನ ನಿಲ್ದಾಣ ಕಾಮಗಾರಿಯನ್ನು ಎ.ಟಿ.ಆರ್-72 ವಿಮಾನಗಳ ಹಾರಾಟಕ್ಕಾಗಿ ನಿರ್ಮಿಸಲಾಗಿದ್ದು, ಮುಂದೆ ಅದನ್ನು ಏರ್ಬಸ್ -320ಗಳ ಹಾರಾಟಕ್ಕಾಗಿ ವಿಸ್ತರಿಸುವಂತೆ ವಿನ್ಯಾಸಗೊಳಿಸಲಾಗಿದೆ. ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ, ಜನಸಾಮಾನ್ಯರು ಸಹ ವಿಮಾನಯಾನವನ್ನು ಕೈಗೊಳ್ಳಬಹುದಾಗಿದೆ.
– ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಕಾರ್ಯಾಚರಣೆಯನ್ನು ಕೇಂದ್ರಿಯ ನಾಗರಿಕ ವಿಮಾನಯಾನ ಸಚಿವಾಲಯದ ಭಾರತೀಯ ವಿಮಾನಯಾನ ಪ್ರಾಧಿಕಾರದೊಂದಿಗೆ ಉಡಾನ್ ಯೋಜನೆ ಅಡಿ ಸೇರ್ಪಡಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಪ್ರವಾಸೋದ್ಯಮಕ್ಕೆ ಪೂರಕ | ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಿಂದ ಜಿಲ್ಲೆಯ ಪ್ರವಾಸೋದ್ಯಮ, ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗವಕಾಶ, ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಸಂಪರ್ಕ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಹೇಳಿದರು.
ಶೀಘ್ರವಾಗಿ ಬೆಳೆಯುತ್ತಿರುವ ಆರ್ಥಿಕ ಮತ್ತು ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಗಮದಲ್ಲಿರಿಸಿಕೊಂಡು ಜಿಲ್ಲೆಯ ಭರಣಾಪುರ ಹಾಗೂ ಮದಭಾವಿ ಗ್ರಾಮಗಳಲ್ಲಿನ 727 ಎಕರೆ ಜಮೀನಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ.
ಸಿಎಂ ಬಣ್ಣನೆ | ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಹಾಗೂ ನಿಂಬೆ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಒಣ ದ್ರಾಕ್ಷಿ ಮತ್ತು ನಿಂಬೆ ಹಣ್ಣನ್ನು ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ಪ್ರಾರಂಭದಿಂದ ಈ ಎಲ್ಲ ಚಟುವಟಿಕೆಗಳಿಗೆ ಹೆಚ್ಚಿನ ಮಾರುಕಟ್ಟೆ ಲಭ್ಯವಾಗಲಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಶಾಸಕ ಆರಗ ಜ್ಞಾನೇಂದ್ರ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವಿಜಯಪುರದಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಶಾಸಕ ದೇವಾನಂದ್ ಚವ್ಹಾಣ್ ಉಪಸ್ಥಿತರಿದ್ದರು.

