ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ಅಡಕೆ ಸೇರಿಸಿ, ಕಾರಣವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಅಡಿ ಅಡಕೆ ಸೇರಿಸಬೇಕೆಂದು ಶಿವಮೊಗ್ಗ ಜಿಲ್ಲಾ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಿಯಿಂದ ಅಡಕೆಯನ್ನು ಕೈಬಿಟ್ಟಿದ್ದು ಬರುವ ದಿನಗಳಲ್ಲಿ ಅಡಕೆಗೆ ದೊಡ್ಡ ಆತಂಕವಿದೆ ಎಂದು ತಿಳಿಸಿದರು.

ಇದನ್ನೂ ಓದಿ । ರೈತರ ಮಹಾ ಪಂಚಾಯತ್‍ಗೆ ಆಗಮಿಸಲಿದ್ದಾರೆ ಲಕ್ಷಕ್ಕೂ ಅಧಿಕ ಜನ, ಭಾಗವಹಿಸಲಿದ್ದಾರೆ 5 ಜಿಲ್ಲೆಗಳ ರೈತರು

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿರುವ ಆಶ್ವಾಸನೆಯಂತೆ, ಅಧಿಕಾರಕ್ಕೆ ಬಂದರೆ ಅಡಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದರು. ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಅಡಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿದರು.

ಕರ್ನಾಟಕದ 10 ಜಿಲ್ಲೆಗಳಲ್ಲಿ ಅಡಕೆ ಪ್ರಮುಖ ಬೆಳೆಯಾಗಿದೆ. ಆದಾಯ ಮೂಲವಾಗಿದೆ. ಇವುಗಳಲ್ಲಿ ಒಂದು ಜಿಲ್ಲೆಗಾದರೂ ಅಡಕೆಯನ್ನು ‘ಒಂದು ಜಿಲ್ಲೆ, ಒಂದು ಉತ್ಪನ್ನ’ಕ್ಕೆ ಸೇರಿಸಬೇಕಿತ್ತು. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಅಡಕೆ ಕೈಬಿಡಲಾಗಿದೆ. ಈ ಬಗ್ಗೆ ಸರ್ಕಾರ ಕಾರಣ ತಿಳಿಸಬೇಕು. ಅಡಕೆ ಬೆಳೆಗಾರರಿಗೆ ಕ್ಷಮೆ ಕೇಳಬೇಕು.

Ramesh Hegdeಅಡಕೆ ಟಾಸ್ಕ್ ಫೋರ್ಸ್ ಬೆಳೆಗಾರರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಸಂಸದರು ಬಜೆಟ್ ಅಧಿವೇಶನದಲ್ಲಿ ಅಡಕೆ ಬೆಳೆಗಾರರ ಸಮಸ್ಯೆಗಳ ಕುರಿತು ಗಮನ ಸೆಳೆಯಬೇಕು. ಅಧಿಕ ಅನುದಾನಕ್ಕಾಗಿ ಒತ್ತಾಯಿಸಬೇಕು. ಇಲ್ಲವಾದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು.
– ಬಿ.ಎ.ರಮೇಶ್ ಹೆಗ್ಡೆ, ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಅಡಕೆ ಬೆಳೆಗಾರರ ಸಂಘ

ಕಳೆದ ಏಳು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಚುನಾವಣೆ ವೇಳೆ ನೀಡಿರುವ ಭರವಸೆ ಇಲ್ಲಿವರೆಗೆ ಈಡೇರಿಸಿಲ್ಲ. ಅಡಕೆ ಬೆಳೆಗಾರರನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಆರೋಪಿಸಿದರು.
2014ರ ಭರವಸೆ ಮರೆತ ಮೋದಿ | ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಅಡಕೆಗೆ ಗೌರವ ತಂದುಕೊಡುವುದಾಗಿ ಮತ್ತು ಅಡಕೆ ಬೆಳೆಗಾರರು ಹಿತ ಕಾಪಾಡುವ ಭರವಸೆ ನೀಡಿದ್ದರು. ಅದನ್ನು ಮೋದಿ ಅವರು ಮರೆತಿದ್ದಾರೆ ಎಂದು ಹೇಳಿದರು.
ತಜ್ಞರ ಸಮಿತಿ ನೇಮಿಸುವಲ್ಲಿ ವಿಫಲ | ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬುವ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡೇವಿಟ್ ಅನ್ನು ಇದುವರೆಗೆ ಸಲ್ಲಿಸಿಲ್ಲ. ಹೊಸ ತಜ್ಞರ ಸಮಿತಿ ನೇಮಕ ಮಾಡಿಲ್ಲ. ಓಟ್ ಬ್ಯಾಂಕ್ ಗೋಸ್ಕರ ಮಾತ್ರ ಅಡಕೆಯನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಇಕ್ಕೇರಿ ರಮೇಶ್, ಹೊಳೆಮಡಿಲು ವೆಂಕಟೇಶ್, ಡಿ.ಸಿ.ನಿರಂಜನ್ ಉಪಸ್ಥಿತರಿದ್ದರು.

error: Content is protected !!