ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಆರೋಗ್ಯ ವಿಮೆ, ಯಾವ ಚಿಕಿತ್ಸೆಗೆ ಎಷ್ಟು ವಿಮೆ

 

 

ಸುದ್ದಿ ಕಣಜ.ಕಾಂ | DISTRICT | DCC BANK
ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ತಮ್ಮ ಸಿಬ್ಬಂದಿಗೆ ಆರೋಗ್ಯ ವಿಮೆಯನ್ನು ಜಾರಿಗೆ ತಂದಿದೆ. ಇದರಿಂದ ಹಲವರಿಗೆ ಅನುಕೂಲವಾಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಹೇಳಿದರು.
ನಗರದ ಬ್ಯಾಂಕ್ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಕ್ಯಾಲೆಂಡರ್, ಡೈರಿ ಬಿಡುಗಡೆ ಮತ್ತು ನೌಕರರಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್ ಇದೇ ಮೊದಲು ಬ್ಯಾಂಕಿನ 177 ನೌಕರರಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೆ ಮುಂದಾಗಿದೆ. ಇದರ ಪ್ರಯೋಜನವು ನೌಕರರು ಮತ್ತು ಕುಟುಂಬದ ಸದಸ್ಯರು ಸೇರಿ 620 ಮಂದಿಗೆ ಆಗಲಿದೆ. ಜೊತೆಗೆ, 5 ಲಕ್ಷ ರೂಪಾಯಿವರೆಗೆ ವಿಮೆ ಮೊತ್ತ ಇರುವುದರಿಂದ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ಯಾವುದಕ್ಕೆಷ್ಟು ವಿಮೆ?
ಎಂಪೈನಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಲಭ್ಯವಾಗಲಿದೆ. ಇದರ ಪೂರ್ಣ ಹಣವನ್ನು ವಿಮೆ ಕಂಪೆನಿಯೇ ಪಾವತಿಸಲಿದೆ. ಮಹಿಳೆಯರ ಹೆರಿಗೆಗೆ 30 ಸಾವಿರ ರೂಪಾಯಿ ಹಾಗೂ ಶಸ್ತ್ರಚಿಕಿತ್ಸೆಗೆ 50 ಸಾವಿರ ರೂಪಾಯಿ ನೀಡಲಾಗುತ್ತದೆ. ವಿಮೆ ಅವಧಿ ಒಂದು ವರ್ಷ ಇರಲಿದೆ ಎಂದರು.
ಬ್ಯಾಂಕ್ ಬಗ್ಗೆ ಮತ್ತೆ ಜನರಲ್ಲಿ ವಿಶ್ವಾಸ
ಡಿಸಿಸಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 10.12 ಕೋಟಿ ರೂಪಾಯಿ ಲಾಭ ಗಳಿಸಿದೆ. ಜನರಲ್ಲಿ ಮತ್ತೊಮ್ಮೆ ಬ್ಯಾಂಕ್ ಬಗ್ಗೆ ವಿಶ್ವಾಸ ಮೂಡುತ್ತಿದೆ. ರೈತರಿಗೆ 2 ಕೋಟಿ ರೂಪಾಯಿ ಅಲ್ಪಾವಧಿ ಬೆಳೆ ಸಾಲ ಮಂಜೂರು ಮಾಡಲಾಗಿದೆ. ಹೈನುಗಾರಿಕೆಗಾಗಿ 1,244 ಸದಸ್ಯರಿಗೆ 1.91 ಕೋಟಿ ರೂಪಾಯಿ ಕೆಸಿಸಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ರೈತರಿಗೆ ಮಾಸಿಕ 75 ಪೈಸೆ ಬಡ್ಡಿ ದರದಲ್ಲಿ ವಾಹನ ಸಾಲ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೇ 187 ರೈತ ಸದಸ್ಯರಿಗೆ 14.72 ಕೋಟಿ ರೂಪಾಯಿ ವಾಹನ ಸಾಲ ಮಂಜೂರು ಮಾಡಲಾಗಿದೆ. ಈ ಯೋಜನೆಯು ಜನವರಿ 31ರ ವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ನಿರ್ದೇಶಕರಾದ ಎನ್.ಹೆಚ್. ಶ್ರೀಪಾದರಾವ್, ದುಗ್ಗಪ್ಪಗೌಡ, ಎಸ್.ಪಿ. ದಿನೇಶ್, ಎಚ್.ಕೆ. ವೆಂಕಟೇಶ್, ಎಂ.ಎಂ. ಪರಮೇಶ್, ಜಿ.ಎನ್. ಸುಧೀರ್, ಬಿ.ಕೆ. ಗುರುರಾಜ್, ಎಂ.ಬಿ. ಶ್ರೀಧರ್, ವ್ಯವಸ್ಥಾಪಕ ನಿರ್ದೇಶಕ ಟಿ. ಮಂಜಪ್ಪ, ಕುಲಕರ್ಣಿ ಉಪಸ್ಥಿತರಿದ್ದರು.

https://www.suddikanaja.com/2020/12/21/health-insurance-to-memcos-members-shivamogga/

error: Content is protected !!