ಜೈಲು ರಸ್ತೆ ತಡೆದು ಸ್ಮಾರ್ಟ್ ಸಿಟಿ ವಿರುದ್ಧ ಆಕ್ರೋಶ, ಟಾಪ್ 6 ಬೇಡಿಕೆ ಇಲ್ಲಿವೆ

 

 

ಸುದ್ದಿ ಕಣಜ.ಕಾಂ | CITY | PROTEST
ಶಿವಮೊಗ್ಗ: ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಅತ್ಯಂತ ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಜೊತೆಗೆ, ಕೆಲಸಗಳು ಆಮವೇಗದಲ್ಲಿ ಸಾಗುತ್ತಿರುವುದರಿಂದ ವರ್ತಕರಿಗೆ ಸಮಸ್ಯೆಯಾಗುತ್ತಿದೆ ಎಂದು ಗುರುವಾರ ಜೈಲು ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಎಸ್.ಆರ್. ರಸ್ತೆ ನಿವಾಸಿಗಳು ಮತ್ತು ವರ್ತಕರ ಕ್ಷೇಮಾಭಿವೃದ್ಧಿ ಸಂಘದಿಂದ ರಸ್ತೆ ತಡೆದು ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು, ಜೈಲ್ ರಸ್ತೆಯಲ್ಲಿ ಮಾಡುತ್ತಿರುವ ಕಾಮಗಾರಿ ಕಳಪೆಯಿಂದ ಕೂಡಿವೆ ಎಂದು ಆರೋಪಿಸಿದ್ದಾರೆ.

  1. ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ
    ಜೈಲು ರಸ್ತೆಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಳೆದ ಒಂದು ವರ್ಷದಿಂದ ರಸ್ತೆಯನ್ನು ಅಗೆಯಲಾಗುತ್ತಿದೆ. ಇದು ಸಾರ್ವಜನಿಕರ ಓಡಾಟಕ್ಕೆ ಮತ್ತು ವರ್ತಕರ ವ್ಯಾಪಾರಕ್ಕೆ ತೊಡಕು ಉಂಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
  2. 600 ಮೀಟರ್ ರಸ್ತೆಗೆ 1 ವರ್ಷ ಬೇಕಾ?
    ಜೈಲ್ ಸರ್ಕಲ್ ನಿಂದ ಲಕ್ಷ್ಮೀ ಟಾಕೀಸ್ ವರೆಗೆ ಅಂದಾಜು 600 ಮೀಟರ್ ಅಳತೆ ಇದೆ. ಈ ರಸ್ತೆಯನ್ನು ಮಾಡುವುದಕ್ಕೆ ಒಂದು ವರ್ಷ ಬೇಕಾ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
  3. ಅಗೆದ ಕಡೆಗೆ ಪದೇ ಪದೆ ಗುಂಡಿ
    ಗುತ್ತಿಗೆದಾರರು ಒಮ್ಮೆ ತೆಗೆದ ಗುಂಡಿಯನ್ನು ಮತ್ತೆ ಮುಚ್ಚಿ ಮತ್ತೊಮ್ಮೆ ಅಗೆಯುತ್ತಿದ್ದಾರೆ. ಹರಿಯುವ ನೀರಿನಲ್ಲಿಯೇ ಸಿಮೆಂಟ್ ಕಾಂಕ್ರಿಟ್ ಹಾಕಿ ಕಾಮಗಾರಿ ಮಾಡಲಾಗುತ್ತಿದೆ. ಕೇಳಿದರೆ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
  4. ಕಾರ್ಮಿಕರ ಸಂಖ್ಯೆಯೇ ಕಡಿಮೆ
    ಕಾಮಗಾರಿ ನಡೆಸುವ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಇದರಿಂದ ಕಾಮಗಾರಿ ವೇಗ ಪಡೆಯುತ್ತಿಲ್ಲ. ಆದ್ದರಿಂದ, ಅಗತ್ಯವಿರುವಷ್ಟು ಕಾರ್ಮಿಕರನ್ನು ಇದಕ್ಕಾಗಿ ಬಳಸಿಕೊಳ್ಳಬೇಕು. ಈ ಕಾರಣಕ್ಕಾಗಿ ನಿವಾಸಿಗಳು ಮತ್ತು ವರ್ತಕರು ಕಷ್ಟ ಪಡಬೇಕೆ?
  5. ಕೊರೊನಾನಂತರ ಕಾಮಗಾರಿಗಳ ಹೊಡೆತ
    ಕೊರೊನಾ ಕಾಲದಲ್ಲಿ ಸರಿಯಾದ ವ್ಯಾಪಾರ ವಹಿವಾಟು ಇಲ್ಲದೇ ವರ್ತಕರು ಕಷ್ಟಪಟ್ಟಿದ್ದಾರೆ. ಈಗ ರಸ್ತೆಗಳನ್ನು ಅಗೆದು ಬಂದ್ ಮಾಡಿದ್ದರಿಂದ ವ್ಯಾಪಾರವೇ ಆಗುತ್ತಿಲ್ಲ.
  6. ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಲಿ
    ಎಲ್ಲ ಕಾಮಗಾರಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಗುತ್ತಿಗೆದಾರರು ಮನಸೋ ಇಚ್ಛೆ ಮಾಡುತ್ತಿರುವ ಕೆಲಸಗಳ ಮೇಲೆ ಅಂಕುಶ ಹೇರಬೇಕು. ವೈಜ್ಞಾನಿಕವಾಗಿ ಕೆಲಸಗಳಾಗುವಂತೆ ಗಮನಹರಿಸಬೇಕು.
ಬೇಡಿಕೆಗಳ ಪತ್ರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಕೆ.ಜಿ.ವಿನೋದ್, ಆದಿಶೇಷ, ಡಿ.ಎಸ್.ಮಂಜುನಾಥ್, ಶಿವರಾಂ ರಾಯ್ಕರ್, ಸಂದೇಶ್ ಪಾಲನ್ಕರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂತೋಷ್ ಕುಮಾರ್, ರಾಜು, ಕೆ.ವಿ. ವಸಂತಕುಮಾರ್, ಎಸ್.ಬಿ. ಅಶೋಕ್ ಕುಮಾರ್, ಜಗದೀಶ್ ಮಾತನವರ್, ವಿಜಯಕುಮಾರ್, ಡಾ. ಸತೀಶ್ ಚಂದ್ರಶೆಟ್ಟಿ, ರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

https://www.suddikanaja.com/2021/07/10/compensation-to-labors/

error: Content is protected !!