ಶಿವಮೊಗ್ಗ ಮಾರಿಕಾಂಬ ಜಾತ್ರೆ ಬಗ್ಗೆ ಪ್ರಮುಖ‌ ನಿರ್ಧಾರ ಪ್ರಕಟಿಸಿದ ಜಿಲ್ಲಾಡಳಿತ

ಸುದ್ದಿ ಕಣಜ.ಕಾಂ‌ | DISTRICT | MARIKAMBA JATRA
ಶಿವಮೊಗ್ಗ: ಫೆಬ್ರವರಿಯಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ನಗರದ ಸುಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೋತ್ಸವವು ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಅವಧಿಗೆ ಮುಂದೂಡಲಾಗಿದ್ದು, ಮಾರ್ಚ್ 22 ಮತ್ತು 23ರಂದು ನಡೆಸಲು ಜಾತ್ರಾ ಸಮಿತಿಯು ನಿರ್ಧರಿಸಿದೆ.
ಈ ಕುರಿತು ನಡೆಸಲಾದ ಸಭೆಯ ಬಳಿಕ‌ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಸೋಂಕಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಂದಿನ ಸ್ಥಿತಿಗಳನ್ನಾಧರಿಸಿ ಜಾತ್ರೆ ನಡೆಸಲು ಕ್ರಮ ವಹಿಸಲಾಗುವುದು. ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ ಹೊರಗಿನ ಊರುಗಳಿಂದ ಭಕ್ತಾಧಿಗಳ ಆಗಮಿಸದಂತೆ ನಿಯಂತ್ರಿಸಿ, ಸಮಿತಿಯವರು ಮಾತ್ರ ಸಾಂಕೇತಿಕವಾಗಿ ಆಚರಿಸಲು‌ ಅನುವು ಮಾಡಲಾಗುವುದು ಎಂದು ಹೇಳಿದರು.

READ | ಸಕ್ರೆಬೈಲು ರಸ್ತೆಯಲ್ಲಿ ಭಾರಿ ಅನಾಹುತ, ಧಗ-ಧಗನೆ ಹೊತ್ತಿ ಉರಿದ ಕಾರು

ಕೊರೊನಾ ನಿಯಂತ್ರಣದಲ್ಲಿದ್ದರೆ ಅಂಗಡಿ, ಮುಂಗಟ್ಟು, ಸ್ಟಾಲ್ ಮತ್ತು ಎಕ್ಸಿಬಿಷನ್‍ ಗಳಿಗೆ ಅವಕಾಶ ಇರಲಿದೆ. ಸಹಜವಾಗಿ ಜಾತ್ರೆ ನಡೆಸಲು ಕ್ರಮ ಕೈಗೊಳ್ಳಲಾಗುವುದು.‌ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಈ ನಿರ್ಣಯಕ್ಕೆ ಸಮಿತಿಯು ಒಪ್ಪಿಗೆ ಸೂಚಿಸಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ, ಚನ್ನಬಸಪ್ಪ, ಜ್ಞಾನೇಶ್ವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‍ಸುರಗೀಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಉಪಸ್ಥಿತರಿದ್ದರು.

https://www.suddikanaja.com/2022/01/10/shikaripura-shri-marikamba-jatre-cancel-due-to-covid-19-third-wave-allow-to-do-rituals/