ಸುದ್ದಿ ಕಣಜ.ಕಾಂ | DISTRICT | GRAMA 1 SCHEME
ಶಿವಮೊಗ್ಗ: ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯ 241 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ 1 ಕೇಂದ್ರಗಳನ್ನು ಆರಂಭಿಸಲಾಗಿದ್ದು, ಉಳಿದ 30 ಪಂಚಾಯಿತಿಗಳಲ್ಲಿ ಶೀಘ್ರದಲ್ಲಿ ಕೇಂದ್ರಗಳು ಆರಂಭಗೊಂಡು ಸಾರ್ವಜನಿಕ ಸೇವೆಗೆ ಸಜ್ಜಾಗಲಿವೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರೆದಿದ್ದ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳು, ವಿವಿಧ ಕೃಷಿ ಮಾರುಕಟ್ಟೆ ಮಾಹಿತಿ, ಸಕಾಲ ಹಾಗೂ ಸೇವಾ ಸಿಂಧು ಯೋಜನೆಗಳ ಸೇವೆ, ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಗ್ರಾಮ-1 ಕೇಂದ್ರಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಜನತೆ ರಾಜ್ಯ ಸರ್ಕಾರದ 79 ಇಲಾಖೆಗಳ 300ಕ್ಕೂ ಹೆಚ್ಚಿನ ಸೇವೆಗಳಿಗಾಗಿ ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡದೆ ಸಮೀಪದ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇದರಿಂದ ಸಮಯ, ಹಣ ಉಳಿತಾಯವಾಗಲಿದೆ. ಸಾರ್ವಜನಿಕರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದರು.
READ | ಅಂತರ ಜಿಲ್ಲಾ ಬೈಕ್ ಕಳ್ಳರ ಗ್ಯಾಂಗ್ ಅರೆಸ್ಟ್, ಲಕ್ಷಾಂತರ ಮೌಲ್ಯದ ಬೈಕ್ ಗಳು ಸೀಜ್
9000 ಅರ್ಜಿಗಳ ವಿಲೇವಾರಿ
ಕಳೆದ 4-6 ತಿಂಗಳಲ್ಲಿ ಸುಮಾರು 9000ಅರ್ಜಿಗಳು ಗ್ರಾಮ-1 ಕೇಂದ್ರಗಳ ಮೂಲಕ ವಿಲೇವಾರಿಯಾಗಿದೆ. ಆರಂಭದ ಹಂತದಲ್ಲಿ ಯೋಜನೆಯ ವ್ಯವಸ್ಥಿತ ಅನುಷ್ಠಾನದಲ್ಲಿ ಅಲ್ಪಮಟ್ಟಿನ ನ್ಯೂನತೆಗಳಿದ್ದು ಕಾಲಾನಂತರದಲ್ಲಿ ಎಲ್ಲವೂ ಸರಿಯಾಗಲಿದೆ. ಸಾರ್ವಜನಿಕರು ಜಿಲ್ಲಾಡಾಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಹಾಗೂ ಸಕಾಲದಲ್ಲಿ ಮಾಹಿತಿ ಒದಗಿಸಿ ಜನಸ್ನೇಹಿ ವಾತಾವರಣ ನಿರ್ಮಿಸಬೇಕು. ಜಿಲ್ಲಾ ಮಟ್ಟದ ಸಮಿತಿಯಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಆಯಾ ತಾಲೂಕುಗಳಲ್ಲಿ ಗ್ರಾಮ-1 ಸೇವೆಗಳ ಕುರಿತು ನಡೆಯುವ ಸಭೆಯಲ್ಲಿ ಭಾಗವಹಿಸುವಂತೆ ಹಾಗೂ ಕೇಂದ್ರಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
https://suddikanaja.com/2022/01/22/full-report-of-arecanut-research-to-be-rolled-out-soon-said-araga-jnanendra/