
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಸಂಚರಿಸುವ ಆಟೋ(auto)ಗಳಿಗೆ ದರ ನಿಗದಿಪಡಿಸಲಾಗಿದ್ದು, ಒಂದೂವರೆ ಕಿಲೋ ಮೀಟರ್’ಗೆ ₹40 ಹಾಗೂ ನಂತರದ ಪ್ರತಿ ಕಿಮೀಗೆ ₹20 ನಂತೆ ದರ ನಿಗದಿಪಡಿಸಲಾಗಿದೆ. ಇದನ್ನು ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvsmani) ಸೂಚನೆ ನೀಡಿದರು.
ಕಳೆದ ಐದಾರು ವರ್ಷಗಳಿಂದ ಆಟೋ ದರ ಹೆಚ್ಚಳವಾಗಿರಲಿಲ್ಲ. ಹೀಗಾಗಿ, ಆಟೋ ಚಾಲಕರ ಮನವಿಯಂತೆ ಪ್ರತಿ ಒಂದೂವರೆ ಕಿಮೀಗೆ ₹40 ನಿಗದಿಪಡಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಆಟೋ ಚಾಲನೆ ಮಾಡಬೇಕು. ಆಟೋಗಳಿಗೆ ಮೀಟರ್ ಅಳವಡಿಸಿದ ನಂತರವಷ್ಟೇ ಹೊಸ ದರ ಅನ್ವಯವಾಗಲಿದೆ.
| ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದರ ನಿಗದಿ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಹೊಸ ದರ ಅನುಷ್ಠಾನಕ್ಕೂ ಮುನ್ನ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದು ಆದೇಶಿಸಿದರು.
READ | KPSCಯಿಂದ 105 Statistical inspector ಹುದ್ದೆಗಳ ನೇಮಕಾತಿಗೆ ಅಧಿಸೂಚನೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ನಗರ ವ್ಯಾಪ್ತಿಯಲ್ಲೇ ಸುಮಾರು 5,000ದಷ್ಟು ಆಟೋಗಳಿವೆ. ಅದರಲ್ಲಿ 4,000 ಸಕ್ರಿಯವಾಗಿದ್ದು, ಈ ಎಲ್ಲ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ತದನಂತರವಷ್ಟೇ ಹೊಸ ದರ ಅನ್ವಯವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ನೀಡಿದ ನಿರ್ದೇಶನಗಳಿವು
- ಕಡ್ಡಾಯವಾಗಿ ಎಲ್ಲ ಆಟೋ ಚಾಲಕರು ಸಮವಸ್ತ್ರ ಧರಿಸಬೇಕು.
- ಧರಿಸದ ಪಕ್ಷದಲ್ಲಿ ಅಂತಹವರಿಗೆ ದಂಡ ವಿಧಿಸಲಾಗುವುದು.
- ನೋ ಪಾರ್ಕಿಂಗ್ ಜಾಗಗಳಲ್ಲಿ ಆಟೋಗಳ ನಿಲುಗಡೆ ನಿಷಿದ್ಧ. ನಿಯಮ ಮೀರಿದರೆ ಮುಲಾಜಿಲ್ಲದೇ ಕ್ರಮ.
- ಆಟೋ ನಿಲ್ದಾಣಗಳಿಲ್ಲದ ಕಡೆಗಳಲ್ಲಿ ಆಟೋಗಳನ್ನು ನಿಲ್ಲಿಸುವಂತಿಲ್ಲ.
- ಆಟೋಗಳಲ್ಲಿ ಚಾಲಕನ ಪಕ್ಕದ ಸೀಟಿನಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳುವ ಅವಕಾಶವಿಲ್ಲ.
- ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಪ್ರತಿ ಒಂದೂವರೆ ಕಿಮೀಗೆ ನಿಗದಿಪಡಿಸಿರುವ ದರದ ಮೇಲೆ ಶೇ.50ರಷ್ಟು ಮಾತ್ರ ಹೆಚ್ಚುವರಿ ಹಣ ಪಡೆಯತಕ್ಕದ್ದು.
- ಆಟೋ ಚಾಲಕರು ಮನಸೋಇಚ್ಛೆ ಹಣ ವಸೂಲಿ ಮಾಡಿತ್ತಿದ್ದಾರೆ, ಪ್ರಯಾಣಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ ಎಂಬ ಆರೋಪಗಳಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು.
ಮೀಟರ್ ಅಳವಡಿಕೆಗೆ ನವೆಂಬರ್ ಗಡುವು
ಆಟೋಗಳಿಗೆ ಮೀಟರ್ ಅಳವಡಿಸುವುದಕ್ಕೆ ನವೆಂಬರ್ ಅಂತ್ಯದವರೆಗೆ ಗಡುವು ನೀಡಲಾಗಿದೆ. ಇದರೊಳಗೆ ಎಲ್ಲ ಆಟೋ ಚಾಲಕರು ಇದನ್ನು ಕಾರ್ಯಾನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಅಂತಹ ಆಟೋಗಳಿಗೆ ದಂಡ ವಿಧಿಸಲಾಗುವುದು. ಮುಂದುವರಿದು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಆರ್.ಟಿಓ ಗಂಗಾಧರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.