Ganesh chaturthi | ಗಣೇಶ ಪ್ರತಿಷ್ಠಾಪನೆಗೆ ನಿರ್ಬಂಧ ಬೇಡ, ವಿಶ್ವ ಹಿಂದೂ ಪರಿಷತ್ ಬೇಡಿಕೆಗಳೇನು?

Hindu mahasabha Ganesha

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಿಂದೂ ಬಾಂಧವರು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲು ಯಾವ ನಿರ್ಬಂಧವನ್ನೂ ಹೇರಬಾರದು ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಪತಿ ಹಬ್ಬ ಎಂಬುದು ಹಿಂದೂಗಳ ಪ್ರಮುಖವಾದ ಹಬ್ಬ. ಆದರೆ ಈ ಹಬ್ಬ ಆಚರಿಸಲು ಬೇಡವಾದ ಹಲವು ನಿಬಂಧನೆಗಳನ್ನು ಹೇರುತ್ತಿದೆ. ಈ ನಿಬಂಧನೆಗಳು ಭಕ್ತರ ಭಾವನೆಗೆ ಧಕ್ಕೆ ಉಂಟುಮಾಡುತ್ತವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

READ |  ಗಣೇಶ ಚತುರ್ಥಿ ಹಿನ್ನೆಲೆ ವಿಶಷ ರೈಲು ಸೇವೆ, ಇಲ್ಲಿದೆ ವೇಳಾಪಟ್ಟಿ

ಜೆ.ಆರ್.ವಾಸುದೇವ್ ಹೇಳಿದ್ದೇನು?

  • ಕೇವಲ ದೇವಸ್ಥಾನ, ಸಭಾಮಂದಿರಗಳಿಗೆ ಸೀಮಿತ ಮಾಡದೆ ಸಾರ್ವಜನಿಕ ಪೆಂಡಾಲ್‌ಗಳಲ್ಲೂ ಗಣೇಶೋತ್ಸವ ಆಚರಿಸುವಂತಾಗಬೇಕು.
  • ಸಾರ್ವಜನಿಕ ಗಣಪತಿ ಸಮಿತಿಯವರಿಗೆ ಬಂಟಿಂಗ್ಸ್ ಹಾಗೂ ಕೇಸರಿ ಧ್ವಜಗಳನ್ನು ಹಾಕುವಂತಿಲ್ಲ ಎಂದು ಹೇಳುವುದು ಸರಿಯಲ್ಲ. ಇದರ ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಹೇಳುವುದು ಯಾವ ನ್ಯಾಯ?
  • ಸಾರ್ವಜನಿಕ ಗಣಪತಿ ಇಡುವವರು ಸಿಸಿ ಕ್ಯಾಮೆರಾ ಅಳವಡಿಸುವುದು ಸಾಧ್ಯವೇ. ಪೊಲೀಸರು ಬೇಕಾದರೆ ಅಳವಡಿಸಿಕೊಳ್ಳಲಿ. ಇಂತಹ ಗೊಂದಲ ಸೃಷ್ಟಿಸಬಾರದು.
  • ಗಣಪತಿ ವಿಸರ್ಜನೆಯನ್ನು ಹಿಂದೂ ಸಂಪ್ರದಾಯದಂತೆ ತಮ್ಮ ಹತ್ತಿರದಲ್ಲಿರುವ ಹೊಳೆ, ಚಾನಲ್, ಬಾವಿ ಇಂತಹ ಜಾಗದಲ್ಲಿ ವಿಸರ್ಜನೆ ಮಾಡುತ್ತಾರೆ. ಪೊಲೀಸ್ ಇಲಾಖೆ ಇದಕ್ಕೆ ಸಹಕಾರ ನೀಡಬೇಕು.

ಒಟ್ಟಾರೆ ಗಣಪತಿ ಹಬ್ಬ ಎನ್ನುವುದು ದೇಶದ ಏಕತೆ ಸಾರುವ ಉದ್ದೇಶದಿಂದ ಆರಂಭವಾದುದು. ಇದರಲ್ಲಿ ಹಿಂದೂಗಳ ಭಾವನೆ ಅಡಗಿದೆ. ಇಂತಹ ಹಬ್ಬಕ್ಕೆ ನಿರ್ಬಂಧ ಹೇರುವುದನ್ನು ನಿಲ್ಲಿಸಬೇಕು. ಜೊತೆಗೆ ಶಾಂತಿ ಸಭೆಗಳಲ್ಲಿ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳನ್ನು ಕಡಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಾರಾಯಣ ಜಿ. ವರ್ಣೇಕರ್, ಬಜರಂಗದಳದ ರಾಘವನ್ ವಡಿವೇಲು, ನಾಗೇಶ್ ಗೌಡ ಇದ್ದರು.

ಎಸ್.ಪಿ.‌ ಮಿಥುನ್ ಕುಮಾರ್ ಹೇಳಿದ್ದೇನು?

SP Mithun Kumar 1

ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕೇಸರಿ ಧ್ವಜ, ಬಂಟಿಂಗ್ಸ್ ಹಾಕಲು ಪೊಲೀಸ್ ಇಲಾಖೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಣಪತಿ ಮೂರ್ತಿಯನ್ನು ದೇವಸ್ಥಾನಗಳಲ್ಲಿ ಮಾತ್ರ ಪ್ರತಿಷ್ಠಾಪಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಬಾರದು ಎಂದು ಪೊಲೀಸ್ ಇಲಾಖೆಯಿಂದ ನಿಬಂಧಗಳಿವೆ ಎಂಬ ವದಂತಿ ಹರಡಲಾಗುತ್ತಿದೆ. ಆದರೆ ಅದು ತಪ್ಪು. ಪ್ರತಿಷ್ಠಾಪನೆಯ ಸ್ಥಳಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ನಿಬಂಧಗಳನ್ನು ವಿಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ವರ್ಷದವರೆಗೆ ಅನುಸರಿಸಿದ್ದನ್ನು ಈ ವರ್ಷವೂ ಮಾಡಲಾಗುತ್ತದೆ. ಕಳೆದ ವರ್ಷ ಎಲ್ಲೆಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತೋ ಅದನ್ನು ಮುಂದುವರಿಸಲು ಸಂಘಟಕರು ಬಯಸಿದಲ್ಲಿ ಮುಂದುವರಿಸಲಾಗುವುದು. ಪೊಲೀಸ್ ಇಲಾಖೆಯಿಂದ ಯಾವುದೇ ನಿರ್ಬಂಧವಿಲ್ಲ ಎಂದರು.
ಮಂಗಳವಾದ್ಯಕ್ಕೂ ಇಲ್ಲ ಅಡ್ಡಿ
ಮಂಗಳ ವಾದ್ಯ ಬಳಸಲು ಅಡ್ಡಿ ಇಲ್ಲ. ಪೊಲೀಸ್ ಇಲಾಖೆಯಿಂದ ಅಂತಹ ಯಾವುದೇ ನಿಬಂಧಗಳನ್ನು ವಿಧಿಸಲಾಗಿಲ್ಲ ಎಂದಿದ್ದಾರೆ.
ಯಾವುದೇ ಸುಳ್ಳು ಮಾಹಿತಿಯನ್ನು ಹರಡಬಾರದು. ಯಾವುದೇ ಸ್ಪಷ್ಟೀಕರಣಗಳನ್ನು ಮಾಡಬೇಕಾದರೆ, ನ್ಯಾಯವ್ಯಾಪ್ತಿಯ ಠಾಣೆಗಳು, ಇನ್ಸ್‌ಪೆಕ್ಟರ್‌ಗಳು ಅಥವಾ ಡಿವೈಎಸ್ಪಿ ಅಥವಾ ತಮ್ಮನ್ನು ವೈಯಕ್ತಿಕವಾಗಿ ಸಂಪರ್ಕಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

error: Content is protected !!