ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯು ಸಮಾಜವಾದದ ತವರೂರಾಗಿದೆ. ಸಮಾಜವಾದಿ ಹೋರಾಟಗಾರರಾದ ಗೋಪಾಲಗೌಡರ ಸ್ಮರಣಾರ್ಥ ಸ್ಮಾರಕ ಮತ್ತು ಉಳುವವನೆ ಹೊಲದ ಒಡೆಯ ಹೋರಾಟದ ನೆನಪಿಗಾಗಿ ಕಾಗೋಡು ಸ್ಮಾರಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಹೇಳಿದರು.
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಂದು ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ 75 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
READ | ರಾಜಕೀಯ ವಲಯದಲ್ಲಿ ಶ್ಯಾಮನೂರು ಶಿವಶಂಕರಪ್ಪರ ಹೇಳಿಕೆ ಸಂಚಲನ, ರಾಘವೇಂದ್ರರನ್ನು ಗೆಲ್ಲಿಸುವಂತೆ ಬಹಿರಂಗ ಮನವಿ
ಸಮಾಜವಾದದಲ್ಲಿ ನಂಬಿಕೆಯುಳ್ಳ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಎಂಬ ತತ್ವದಡಿಯಲ್ಲಿ ನಂಬಿಕೆಯಿರಿಸಿದ್ದು ಹಲವು ಹೊಸ ಯೋಜನೆಗಳ ಮೂಲಕ ನಾಡಿನ ಸರ್ವತೋಮುಖ ಅಭಿವೃದ್ದಿಗೆ ವಿಶೇಷ ಗಮನ ಹರಿಸಿದೆ. ಅಲ್ಲದೇ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಮನೆಯ ಕೋಟ್ಯಾಂತರ ಫಲಾನುಭವಿಗಳಿಗೆ ನೇರ ಆರ್ಥಿಕ ಸೌಲಭ್ಯವನ್ನು ಒದಗಿಸಿದೆ ಎಂದರು.
ಇದೇ ವರ್ಷ 500 ಕೆಪಿಎಸ್ ಶಾಲೆ
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. ಸಿಎಸ್‍ಆರ್ ನಿಧಿಯ ಜೊತೆಗೆ ಇದೇ ವರ್ಷ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‍ಹುಕುಂ ಸಾಗುವಳಿದಾರರು ಮತ್ತು ಅರಣ್ಯ ವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲೆಯಲ್ಲಿ ಮತ್ತು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಉನ್ನತ ಸಭೆ
ಜಿಲ್ಲೆಯಲ್ಲಿ ಆಯುಷ್ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಸರ್ಕಾರವು ಅನುಮತಿ ನೀಡಿದ್ದು ಈಗಾಗಲೇ ₹20 ಕೋಟಿ ಪ್ರಾರಂಭಿಕ ಅನುದಾನ ಬಿಡುಗಡೆ ಮಾಡಿದೆ. ಸೊರಬ ತಾಲ್ಲೂಕಿನ ಕುಪ್ಪಗಡ್ಡೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ₹22 ಕೋಟಿ ಮಂಜೂರು ಆಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆ, ಪ್ರವಾಸೋದ್ಯಮ ಅಭಿವೃದ್ದಿಗಾಗಿ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದ್ದು, ಶಿವಮೊಗ್ಗ ಫೋಕಸ್ ಹಾಗೂ ಕೈಗಾರಿಕಾ ಮೇಳ ನಡೆಸಲು ಸಿದ್ದತೆ ನಡೆಸಲಾಗಿದೆ. ಹಾಗೂ ಉದ್ಯೋಗ ಮೇಳ ಮತ್ತು ಜನಸ್ಪಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವತಿಯಿಂದ ರಾಗಿಗುಡ್ಡದಲ್ಲಿ ಸೌಹಾರ್ದ ಕ್ರೀಡಾಕೂಟ ನಡೆಸುವ ಮೂಲಕ ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟಕ್ಕೆ ಉತ್ತಮ ಉದಾಹರಣೆಯಾಗಿರುವುದಕ್ಕೆ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.
– ಮಧು ಎಸ್.ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೊಲೀಸ್ ಸಶಸ್ತ್ರ ದಳಗಳು, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಪಡೆಗಳು ಶಿಸ್ತಿನ ಪಥಸಂಚಲನ ನಡೆಸಿದರು. ಇದೇ ವೇಳೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಿದ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪಡೆದ ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿಯವರನ್ನು ಅಭಿನಂದಿಸಲಾಯಿತು.
ಪರೇಡ್ ನಲ್ಲಿ ಯಾರಿಗೆಲ್ಲ ಬಹುಮಾನ?
ಪಥಸಂಚಲನದಲ್ಲಿ ಎನ್‍ಸಿಸಿ ಜ್ಯೂನಿಯರ್ ಬಾಲಕಿಯರ ವಿಭಾಗ ಪ್ರಥಮ, ಸರ್ಕಾರಿ ಬಾಲಕರ ಬಾಲಮಂದಿರದ ಬಾಲಕರು ದ್ವಿತೀಯ ಹಾಗೂ ಸಾಂದೀಪಿನಿ ಶಾಲೆ ವಿದ್ಯಾರ್ಥಿಗಳಿಗೆ ತೃತೀಯ ಬಹುಮಾನ ಪಡೆದರು.
ಸಂವಿಧಾನ ಜಾರಿಗೆ ಬಂದ 75 ವರ್ಷಗಳ ಸವಿನೆನಪಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನದ ಆಶಯ ಸಾರುವ ಸ್ತಬ್ದ ಚಿತ್ರದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಈ ಸ್ತಬ್ದಚಿತ್ರವುಳ್ಳ ವಾಹನವು ಜಿಲ್ಲಾದ್ಯಂತ 28 ದಿನ ಕಾಲ ಸಂಚರಿಸಿ ಸಂವಿಧಾನ ಕುರಿತಾದ ಮಾಹಿತಿಯನ್ನು ನೀಡಲಿದ್ದು ಫೆ.24 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಎಸ್.ರುದ್ರೆಗೌಡರು, ಅರುಣ್ ಕುಮಾರ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಇತರೆ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.