Consumer forum | ಕೋವಿಡ್ ಚಿಕಿತ್ಸೆ ಪಡೆದ ವೈದ್ಯನಿಗೆ ಪರಿಹಾರ ನೀಡಲು ಇನ್ಶುರೆನ್ಸ್ ಕಂಪನಿ ಹಿಂದೇಟು, ಗ್ರಾಹಕರ ನ್ಯಾಯಾಲಯ ಮಹತ್ವದ ತೀರ್ಪು

Consumer forum

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅರ್ಜಿದಾರ ಸಿ.ಡಿ ರವಿರಾಜ್ ಇವರು ಎಚ್‍ಡಿಎಫ್‍ಸಿ-ಇಆರ್‍.ಜಿಓ ಜನರಲ್ ಇನ್ಶೂರೆನ್ಸ್ ಕಂ.ಲಿ ಮುಂಬೈ ಮತ್ತು ಶಿವಮೊಗ್ಗ ವಿರುದ್ದ ಸೇವಾನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರರಿಗೆ ವಿಮಾ ಮೊತ್ತ ನೀಡುವಂತೆ ಆಯೋಗದ ಪೀಠ ಆದೇಶಿಸಿದೆ.
ಅರ್ಜಿದಾರರು ಬಿಎಎಂಎಸ್ ವೈದ್ಯರಾಗಿದ್ದು ಎಚ್‍ಡಿಎಫ್‍ಸಿ-ಇಆರ್‍.ಜಿಓ ಜನರಲ್ ಇನ್ಶೂರೆನ್ಸ್ ಕಂ.ಲಿ ಇವರಿಂದ ₹6 ಲಕ್ಷ ಪರಿಹಾರ ಮೊತ್ತವನ್ನು ಒಳಗೊಂಡ ಹೆಲ್ತ್ ಇನ್ಶುರೆನ್ಸ್ ಪಾಲಿಸಿಯನ್ನು 2021 ರಲ್ಲಿ ಪಡೆದಿರುತ್ತಾರೆ.
ಅರ್ಜಿದಾರರು ಆಗಸ್ಟ್ 2, 2021 ರಂದು ಕೋವಿಡ್-19 ಗೆ ಒಳಗಾಗಿ ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಚಿಕಿತ್ಸೆ ಒಟ್ಟು ಖರ್ಚು ₹4,08,564 ಗಳಾಗಿದ್ದು ಚಿಕಿತ್ಸೆ ನಂತರ ಅರ್ಜಿದಾರರು ವಿಮಾ ಕಂಪೆನಿಯವರಲ್ಲಿ ವೈದ್ಯಕೀಯ ವೆಚ್ಚದ ಮರುಪಾವತಿ ಅರ್ಜಿ ಸಲ್ಲಿಸಿದಾಗ ಎದುರುದಾರರು ನಕಲಿ ದಾಖಲೆ ಸೃಷ್ಟಿಸಿ ತಪ್ಪಾಗಿ ನಿರೂಪಿಸದ್ದಾರೆಂದು ತಿಳಿಸಿ, ವಿಮಾ ಪರಿಹಾರ ನೀಡಲು ನಿರಾಕರಿಸಿದ್ದಲ್ಲದೆ, ವಿಮಾ ಪಾಲಿಸಿಯನ್ನು ಕೂಡ ರದ್ದು ಪಡಿಸಿರುತ್ತಾರೆ.

READ |  ಶಿವಮೊಗ್ಗ ಸೇರಿ ರಾಜ್ಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ, ಇಲ್ಲಿದೆ ಪಟ್ಟಿ

ಅರ್ಜಿಗೆ ಪುರಸ್ಕಾರ
ಗ್ರಾಹಕರ ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಪಕ್ಷಗಾರರು ಹಾಜರುಪಡಿಸಿದ ಎಲ್ಲ ದಾಖಲೆಗಳನ್ನು, ಚಿಕಿತ್ಸೆ ಪಡೆದಂತಹ ವೈದ್ಯಕೀಯ ದಾಖಲೆಗಳನ್ನು ಅವಲಂಬಿಸಿ, ಎದುರುದಾರ ವಿಮಾ ಕಂಪೆನಿ ನಿರಾಕರಣೆಯು ಸೇವಾನ್ಯೂನ್ಯತೆಯಿಂದ ಕೂಡಿರುತ್ತದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸುತ್ತದೆ.
45 ದಿನಗಳಲ್ಲಿ ಪಾಲಿಸಿ ಪುನರುಜ್ಜೀವನ
ವಿಮಾ ಕಂಪೆನಿಯು ಈ ಆದೇಶವಾದ 45 ದಿನಗಳೊಳಗಾಗಿ ಅರ್ಜಿದಾರರು ಪಡೆದಿದ್ದ ಪಾಲಿಸಿಯನ್ನು ಪುನರುಜ್ಜೀವಗೊಳಿಸಬೇಕು ಹಾಗೂ ವಿಮಾ ಪರಿಹಾರ ಮೊತ್ತ ₹4,08,165 ನ್ನು ವಾರ್ಷಿಕ ಬಡ್ಡಿ ಶೇ.9 ಸಮೇತ ಪಾವತಿಸತಕ್ಕದ್ದು ಮತ್ತು ₹25,000 ಗಳನ್ನು ಮಾನಸಿಕ ಹಾನಿಗೆ ಪರಿಹಾರವಾಗಿ, ₹10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟೆ, ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿರುತ್ತದೆ.

error: Content is protected !!