ಹುಣಸೋಡು ಸ್ಫೋಟ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ನಯಾಪೈಸೆ ಪರಿಹಾರ, ಕಾನೂನು ಹೋರಾಟದ ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ | DISTRICT | HUNASODU BLAST
ಶಿವಮೊಗ್ಗ: ಇಡೀ ದೇಶದ ಗಮನವನ್ನೇ ತನ್ನತ್ತ ಸೆಳೆದಿದ್ದ ಹುಣಸೋಡು ಸ್ಫೋಟ (hunasodu blast) ಪ್ರಕರಣ ನಡೆದು ಒಂದು ವರ್ಷ ಗತಿಸಿದೆ. ಆದರೆ, ಘಟನೆಯಲ್ಲಿ ಆಸ್ತಿಪಾಸ್ತಿ ಹಾನಿಯಾದ ಸಂತ್ರಸ್ತರಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ.
ಈ ಕುರಿತು ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿದ ನವಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್ ಗೌಡ, ಸಂತ್ರಸ್ತರನ್ನು ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

Ramesh gowda
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನವಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್ ಗೌಡ.

ಸ್ಫೋಟ ಪ್ರಕರಣದಲ್ಲಿ  ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ, ಹುಣಸೋಡು ಸುತ್ತಲಿನ ಗ್ರಾಮಗಳಾದ  ಗೆಜ್ಜೇನಹಳ್ಳಿ, ಹನುಮಂತ ನಗರ, ಹುಣಸೋಡು, ಅಬ್ಬಲಗೆರೆ, ಬಸವನಗಂಗೂರು, ಚನ್ನಮುಂಭಾಪುರ, ಬೊಮ್ಮನಕಟ್ಟೆ, ಕಲ್ಲಗಂಗೂರು ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ಚಾವಣಿ, ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿನ ಉಪಕರಣಗಳು ಹಾಳಾಗಿವೆ. ಪರಿಹಾರ ಕೋರಿ ಅರ್ಜಿ ಸಲ್ಲಿಸಿದರೂ ಹಣ ಮಾತ್ರ ಇದುವರೆಗೆ ಲಭಿಸಿಲ್ಲ ಎಂದು ಆರೋಪಿಸಿದರು.
ಸ್ಥಳ ಪರಿಶೀಲನೆ ನಡೆಸದೇ ವರದಿ ಸಲ್ಲಿಕೆ
ಲಕ್ಷಾಂತರ  ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಸುಮಾರು 830 ಸಂತ್ರಸ್ತರು (victims) ಪ್ರತ್ಯೇಕವಾಗಿ ಸ್ಫೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದು, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಿಂದ ಸ್ಥಳ ಪರಿಶೀಲನೆ ನಡೆಸದೇ ಶೇ.10ರಷ್ಟು ಹಾನಿಯಾಗಿದೆ ಎಂದು ವರದಿ ನೀಡಲಾಗಿದೆ ಎಂದು ಆರೋಪ ಮಾಡಿದರು.
ಸ್ಪೋಟ ಪ್ರಕರಣದಲ್ಲಿ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಜಿಲ್ಲಾಡಳಿತ (district administration) ತಕ್ಷಣವೇ ಪರಿಹಾರ ನೀಡಬೇಕು.‌ ಇಲ್ಲದಿದ್ದರೆ ಕಾನೂನು ಸಮರ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ನಿಂಗರಾಜ್, ರಾಜಮ್ಮ, ಸಂತೋಷ್, ದೇವೇಂದ್ರಪ್ಪ ಮತ್ತಿತರರು ಇದ್ದರು.

https://www.suddikanaja.com/2021/12/03/siddaramaiah-allegation-on-bjp-for-percentage-commission-taken-from-contractor-for-noc/

error: Content is protected !!