ಶಿವಮೊಗ್ಗದಲ್ಲಿ ನಡೆಯಲಿದೆ ರಾಜ್ಯದ ಮೊದಲ ಮಕ್ಕಳ ಚಿತ್ರಸಂತೆ, ಆನ್ಲೈನ್ ನಲ್ಲಿ ಮೂಡಿದ ಬಣ್ಣದಗರಿಗೆ ಮಾರಾಟದ ವೇದಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ಮೊದಲ ಚಿತ್ರಸಂತೆ ಡಿಸೆಂಬರ್ 12, 13ರಂದು ನಗರದ ಕುವೆಂಪು ರಂಗಮಂದಿರ ಆವರಣದಲ್ಲಿ ನಡೆಯಲಿದೆ.
‘ಬಣ್ಣದಗರಿ ಚಿತ್ರಸಂತೆ’ ಹೆಸರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ವೇದಿಕೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಚಲನಚಿತ್ರ ಕಲಾವಿದ ಜಿ.ಚನ್ನಕೇಶವ್ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಮಕ್ಕಳಲ್ಲಿ ಸೃಜನಾತ್ಮಕತೆ ಒರೆ ಹಚ್ಚಲು ಆನ್ ಲೈನ್ ನಲ್ಲಿ ಸೇರಿ ವಾರಕ್ಕೆ ಎರಡು ದಿನ ಮೂರ್ನಾಲ್ಕು ಗಂಟೆಗಳ ಕಾಲ ಹಾಡು ಕಲಿಯುವುದು, ಚಿತ್ರ ಬರೆಯುವ ಇತ್ಯಾದಿ ಚಟುವಟಿಕೆಗಳನ್ನು ಮಾಡಿಸಲಾಗಿದೆ. ಮಕ್ಕಳ ಕ್ರಿಯಾಶೀಲ ಚಟವಟಿಕೆಯ ಭಾಗವಾಗಿ ಮಕ್ಕಳೇ ರಚಿಸಿದ ಈ ಚಿತ್ರಗಳ ಪ್ರದರ್ಶನ ಹಾಗೂ ಖರೀದಿಗಾಗಿ ಬಣ್ಣದಗರಿ ಮಕ್ಕಳ ಚಿತ್ರಸಂತೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳಿಗಾಗಿ ಸ್ಪರ್ಧೆ: ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಕೂಡ ಆಯೋಜಿಸಲಾಗಿದೆ. 4ನೇ ತರಗತಿವರೆಗಿನ ಮಕ್ಕಳಿಗೆ `ಶಾಲೆ’ ಕುರಿತು, 4 ರಿಂದ 8ನೇ ತರಗತಿ ಮಕ್ಕಳಿಗೆ `ಪ್ರಕೃತಿ’ ಹಾಗೂ 8 ರಿಂದ 12ನೇ ತರಗತಿ ಮಕ್ಕಳಿಗೆ `ರೈತ’ ಎಂಬ ವಿಷಯವಾಗಿ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು 100 ರೂ. ಪ್ರವೇಶ ಶುಲ್ಕ ಪಾವತಿಸಬೇಕು. ಸ್ಪರ್ಧೆಯು ಡಿಸೆಂಬರ್ 12 ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ವಿಜೇತರಿಗೆ ಪ್ರತಿ ವಿಭಾಗದಲ್ಲಿ ಮೊದಲ ಮೂರು ಬಹುಮಾನ ಹಾಗೂ ಎರಡು ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಕಲಾವಿದರಾದ ಶ್ವೇತ, ರಮೇಶ್, ರತ್ನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844518866 ಸಂಪರ್ಕಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಆರ್.ಎಸ್.ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್, ಎಚ್.ಪಿ.ನದಿ, ಕೆ.ಸಿ.ಚುಕ್ಕಿ, ಎಚ್.ಪಿ.ನಾದ ಉಪಸ್ಥಿತರಿದ್ದರು.

error: Content is protected !!