ಸುದ್ದಿ ಕಣಜ.ಕಾಂ ಸಾಗರ
SAGAR: ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರಸಭೆ ಆವರಣದ ಮಾರಿಕಾಂಬ ಕಲಾವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ರಂಗಕರ್ಮಿ, ನಟ ಟಿ.ಎಸ್.ನಾಗಾಭರಣ ( TS Nagabharana) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಪರಂಪರೆಯು ವಿಶ್ವದ ಶ್ರೇಷ್ಠ ಪರಂಪರೆಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಭಾರತೀಯ ಶ್ರೇಷ್ಠ ಪರಂಪರೆಯನ್ನು ವಿಶ್ವವೇ ಒಪ್ಪಿಕೊಳ್ಳುತ್ತಿದೆ ಎಂದು ಹೇಳಿದರು.
ಭಾರತೀಯ ಪರಂಪರೆಯನ್ನು ಕೀಳಾಗಿ ಕಾಣುವ ಮನೋಭಾವವನ್ನು ಮೆಕಾಲೆ ಶಿಕ್ಷಣ ಪದ್ಧತಿ ಎಲ್ಲರಲ್ಲಿಯೂ ಮೂಡಿಸುತ್ತಿತ್ತು. ಭಾರತೀಯ ವಿಷಯ ಹಾಗೂ ವಿಚಾರಧಾರೆ ಎಂದರೆ ಅದೂ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಚಿಂತನೆ ಬೆಳೆದುಬಿಟ್ಟಿತ್ತು. ಪ್ರಸ್ತುತ ಭಾರತೀಯ ಶ್ರೇಷ್ಠ ಪರಂಪರೆಯನ್ನು ವಿಶ್ವಾದ್ಯಂತ ಒಪ್ಪಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
READ | ಡಿಸಿಸಿ ಬ್ಯಾಂಕ್ ವಿವಿಧ ಹುದ್ದೆಗಳ ನೇಮಕಾತಿಯ ಕಟ್ ಆಫ್ ಅಂಕ ಪ್ರಕಟ, ಹುದ್ದೆವಾರು ಮಾಹಿತಿ ಇಲ್ಲಿದೆ
ವಿಶ್ವಗುರು ಆಗಲು ಆಚರಣೆಗಳೇ ಕಾರಣ
ಇಡೀ ಜಗತ್ತಿಗೆ ವಿಶ್ವಮಾನವ ತತ್ವವನ್ನು ಸಾರಿದ್ದು ಕನ್ನಡಿಗರು. ಆದಿಕವಿ ಪಂಪನಿಂದ ಇವತ್ತಿನವರೆಗೂ ಎಲ್ಲರೂ ವಿಶ್ವಮಾನವ ಸಂದೇಶಗಳನ್ನು ಸಾರಿದರು. ಭಾರತ ದೇಶ ವಿಶ್ವಗುರು ಆಗುವ ದಿಸೆಯಲ್ಲಿ ಭಾರತೀಯ ಪರಂಪರೆ ಹಾಗೂ ಶ್ರದ್ಧೆಯ ಕೇಂದ್ರಗಳಲ್ಲಿನ ಆಚರಣೆಯು ಬಹುಮುಖ್ಯ ಕಾರಣ ಎಂದರು.
ಸಾಗರ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಜರುಗುತ್ತಿದ್ದು, ಸಾಂಸ್ಕೃತಿಕ ವೇದಿಕೆ ಮುಖಾಂತರ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವ ಕಾರ್ಯ ಅಭಿನಂದನೀಯ. ವ್ಯಾಪಕವಾಗಿ ಸಾವಿರಾರು ಭಕ್ತರು ಸಾಗರ ಜಾತ್ರೆಗೆ ಆಗಮಿಸುತ್ತಿದ್ದಾರೆ ಎಂದರು.
– ಕಾಗೋಡು ತಿಮ್ಮಪ್ಪ, ಮಾಜಿ ಸಚಿವ
ಧಾರ್ಮಿಕ ಶ್ರದ್ಧಾಕೇಂದ್ರಗಳ ಸುತ್ತ ಸಮುದಾಯಗಳ ಒಳಗೊಳ್ಳುವಿಕೆ ಸಾಧಿಸುವುದನ್ನು ಭಾರತೀಯ ಪರಂಪರೆ ನಮಗೆಲ್ಲರಿಗೂ ಉತ್ತಮವಾಗಿ ಕಲಿಸಿಕೊಟ್ಟಿದೆ. ವ್ಯಕ್ತಿನಿಷ್ಟ, ಆತ್ಮಸಂವೇದನೆ ಇದ್ದರೆ ಸಮಾಜಮುಖಿ ಚಿಂತನೆ ಉಂಟುಮಾಡಬಹುದು. ಸಮಷ್ಠಿಗೆ ಬೇಕಾದ ಆಲೋಚನೆ ಮೂಡಿಸುವುದು. ಇಡೀ ಸಮಾಜವನ್ನು ಜೀವನ್ಮುಖಿಯಾಗಿಸುವುದು ಜಾತ್ರೆಯ ಉದ್ದೇಶವಾಗಿದೆ ಎಂದು ಹೇಳಿದರು.
ಸಾಗರವನ್ನು ಬಣ್ಣಿಸಿದ ನಾಗಭರಣ
ಸಂಸ್ಕೃತಿಯ ಅನ್ವರ್ಥ ನಾಮ ಸಾಗರ. ಸಂಸ್ಕೃತಿ, ಸಾಹಿತ್ಯ, ಧಾರ್ಮಿಕ, ಪ್ರಾಕೃತಿಕವಾಗಿಯೂ ಸಾಗರ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಸಾಂಸ್ಕೃತಿಕ ವೇದಿಕೆಗಳ ಮುಖಾಂತರ ಸ್ಥಳೀಯ ಯುವ ಪ್ರತಿಭಾವಂತ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲಿ ಅತ್ಯದ್ಭುತ ವೇದಿಕೆಯಾಗಿ ಮಾರ್ಪಾಡಲಿದೆ ಎಂದು ತಿಳಿಸಿದರು.
ರಾಜ್ಯದ ಅತಿದೊಡ್ಡ ಜಾತ್ರೆ
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಸಾಗರದ ಮಾರಿಕಾಂಬ ಜಾತ್ರೆಯು ಪ್ರಮುಖ. ಶಿರಸಿ ಜಾತ್ರೆಯ ಹೊರತುಪಡಿಸಿ ಅದ್ಧೂರಿಯಾಗಿ ವೈಭವಯುತವಾಗಿ ಮಾರಿಕಾಂಬ ಜಾತ್ರೆ ನಡೆಯುವುದು ಸಾಗರದಲ್ಲಿ. ಧಾರ್ಮಿಕ ಶಕ್ತಿ ಕೇಂದ್ರ ಎಂದು ಹೇಳಿದರು.
ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಖಜಾಂಚಿ ನಾಗೇಂದ್ರ ಕುಮಟಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ್ ಕುಮಾರ್ ಗುಡಿಗಾರ್, ಉಪಾಧ್ಯಕ್ಷ ವಿ.ಶಂಕರ್, ಸಹ ಕಾರ್ಯದರ್ಶಿ ಆನಂದ್, ವಸ್ತು ಪ್ರದರ್ಶನ ಸಮಿತಿ ಸಂಚಾಲಕ ತಾರಾಮೂರ್ತಿ, ಪ್ರಮುಖರಾದ ಲಲಿತಮ್ಮ, ಭಾವನಾ ಸಂತೋಷ್, ವಿ.ಮಹೇಶ್, ತುಕಾರಾಂ ಮತ್ತಿತರರು ಉಪಸ್ಥಿತರಿದ್ದರು.