Shivamogga Airport | ಶಿವಮೊಗ್ಗ ವಿಮಾನ ನಿಲ್ದಾಣ ನಾಮಕರಣ, ಕೇಂದ್ರಕ್ಕೆ ಈ ಹೆಸರು ಶಿಫಾರಸು ಮಾಡಿ

Shivamogga Airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ (S.Bangarappa) ಹೆಸರು ಇಡುವಂತೆ ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ (Shridhar hulthikoppa) ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಯಾವುದೇ ಜಾತಿ, ಧರ್ಮ, ಕೋಮು ಎಂದು ನೋಡದೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಅವರು ಜಾರಿಗೆ ತಂದಿರುವ ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಂಕ, 10 ಎಚ್‌ಪಿವರೆಗಿನ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಮೊದಲಾದ ಯೋಜನೆಗಳು ಇಂದಿಗೂ ಮುಂದುವರಿದಿವೆ ಎಂದರು.

READ | ಶಿವಮೊಗ್ಗ ವಿಮಾನಕ್ಕೆ ಕುವೆಂಪು ಹೆಸರು ಘೋಷಣೆ ಬೆನ್ನಲ್ಲೇ ಶುರುವಾಯ್ತು ಬಿಸಿಬಿಸಿ ಚರ್ಚೆ

ಮೆಗ್ಗಾನ್ ಆಸ್ಪತ್ರೆಯನ್ನು ಸಾವಿರ ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಅಂದೇ ಅಡಿಗಲ್ಲು ಹಾಕಿದ್ದರು. ಕೃಷಿ ಕಾಲೇಜು ಆರಂಭ ಶಿವಮೊಗ್ಗ ನಗರಕ್ಕೆ ಗಾಜನೂರಿನಿಂದ ಕುಡಿಯುವ ನೀರು ಕೊಟ್ಟ ರೂವಾರಿ. ತುಂಗಾ ಏತ ನೀರಾವರಿ, ತುಂಗಾ ಮೇಲ್ದಂಡೆ, ಶಿವಮೊಗ್ಗ ಬಸ್ ನಿಲ್ದಾಣ ಸೇರಿದಂತೆ ಹಲವು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದರು.
ಕಾವೇರಿ ನೀರು ತಮಿಳುನಾಡಿಗೆ ಬಿಡುವಂತೆ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಿದ್ದರೂ ಅದನ್ನು ಧಿಕ್ಕರಿಸಿ ರಾಜ್ಯದ ಜನತೆಯ ಹಿತ ಕಾಪಾಡಿದ್ದರು. ತೀವ್ರ ಬರಗಾಲ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ರೈತರಿಗೆ ಜಾತಿ, ಧರ್ಮ ನೋಡದೆ ಬಿತ್ತನೆ ಬೀಜ ವಿತರಣೆ ಮಾಡಿದ್ದರು. ಶಿವಮೊಗ್ಗದ ಆಶ್ರಯ ಬಡಾವಣೆಗೆ ತಮ್ಮ ಹೆಸರು ಇಡುವಂತೆ ಬೆಂಬಲಿಗರು ಆಗ್ರಹಿಸಿದ್ದಾಗ ಅದನ್ನು ನವಿರಾಗಿ ತಿರಸ್ಕರಿಸಿದ್ದರು ಎಂದು‌ ತಿಳಿಸಿದರು.
ಬಂಗಾರಪ್ಪ ಹೆಸರು ಚಿರಸ್ಥಾಯಿ ಮಾಡಿ
ಅಂದಿನ ಮಟ್ಟಿಗೆ ಜಿಲ್ಲೆಗೆ ಇಷ್ಟೆಲ್ಲ ಅನುಕೂಲ ನೀಡಿರುವ ಅವರ ಹೆಸರು ಚಿರಸ್ಥಾಯಿ ಮಾಡಲು ಸರ್ಕಾರ ಮನಸ್ಸು ಮಾಡಬೇಕು. ಬಿಜೆಪಿ ಇಂದು ಅಧಿಕಾರಕ್ಕೆ ಬರುವಲ್ಲಿ ಬಂಗಾರಪ್ಪನವರ ಪಾತ್ರವೂ ಮುಖ್ಯವಾಗಿದೆ. ಅವರು ಬಿಜೆಪಿಗೆ ಬಂದ ವೇಳೆ ಅತೀ ಹೆಚ್ಚು ಸ್ಥಾನಗಳನ್ನು ಪಡೆದಿತ್ತು ಎಂದರು.
ಕುವೆಂಪು, ಯಡಿಯೂರಪ್ಪ ಹೆಸರಿಡಲು ಅಭ್ಯಂತರವಿಲ್ಲ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕುವೆಂಪು ಅಥವಾ ಯಡಿಯೂರಪ್ಪನರ ಹೆಸರು ಇಡುವ ಬಗ್ಗೆಯೂ ಅಭ್ಯಂತರವಿಲ್ಲ. ಅವರ ಬಗ್ಗೆಯೂ ಅಪಾರ ಗೌರವ ಇದೆ. ಕುವೆಂಪು ಸಾಹಿತ್ಯ ಕ್ಷೇತ್ರದ ಮಿನುಗು ತಾರೆ. ಅವರ ಹೆಸರು ಈಗಾಗಲೇ ರಂಗಮಂದಿರ, ರಸ್ತೆ, ಬಡಾವಣೆ, ವಿಶ್ವವಿದ್ಯಾಲಯ ಮೊದಲಾದವುಗಳಿಗೆ ಇಡಲಾಗಿದೆ. ಇದರಿಂದಾಗಿ ಬಂಗಾರಪ್ಪನವರ ಹೆಸರು ವಿಮಾನ ನಿಲ್ದಾಣಕ್ಕೆ ಪರಿಗಣಿಸುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ಎನ್.ಪಿ.ಧರ್ಮರಾಜ್, ಪ್ರಧಾನ ಕಾರ್ಯದರ್ಶಿ ಎಚ್.ಸಿ. ರಾಮಚಂದ್ರ, ಖಜಾಂಚಿ ರಾಮಪ್ಪ ಕಾಗೋಡು, ಪ್ರಮುಖರಾದ ರಾಜಪ್ಪ ತೇಕಲೆ, ಜಿ.ಡಿ. ಮಂಜುನಾಥ ಇದ್ದರು.

Auto | ಶಿವಮೊಗ್ಗದಲ್ಲಿ ಆಟೋಗಳಿಗೆ ಮತ್ತೊಂದು ಕಠಿಣ ರೂಲ್ಸ್ ಜಾರಿ, ಫೆ.28ರಿಂದ‌ ಜಾರಿ, ಉಲ್ಲಂಘಿಸಿದರೆ ಕಠಿಣ ಕ್ರಮ

error: Content is protected !!