ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಫೆ.27ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು, ಅವರಿಗೆ ನೀಡಲು ವಿಶೇಷ ಉಡುಗೊರೆಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದ್ದು, ಈ ಉಡುಗೊರೆಯ ಚಿತ್ರಗಳು ಸಹ ವೈರಲ್ ಆಗಿವೆ.
ಮಲೆನಾಡಿನ ಹೆಬ್ಬಾಗಿಲಾದ (Gateway of malnad) ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಮೋದಿ ಅವರು ಸೋಮವಾರ ಬೆಳಗ್ಗೆ ಆಗಮಿಸಲಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶ್ರೀಗಂಧದ ತವರಲ್ಲಿ ಶ್ರೀಗಂಧದ ಉಡುಗೊರೆ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಶಿವಮೊಗ್ಗಕ್ಕೆ ಎರಡನೇ ಸಲ ಆಗಮಿಸುತ್ತಿದ್ದು, ಅವರನ್ನು ಸ್ವಾಗತಕ್ಕೆ ಇಡೀ ಶಿವಮೊಗ್ಗ ಕೇಸರಿಮಯವಾಗಿದೆ. ಜತೆಗೆ, ಎಲ್ಲೆಡೆ ಬಿಜೆಪಿಯ ಧ್ವಜಗಳು ರಾರಾಜಿಸುತ್ತಿವೆ. ಜತೆಗೆ, ಶ್ರೀಗಂಧದಿಂದ ತಯಾರಿಸಿದ ಶಿವಮೊಗ್ಗ ವಿಮಾನ ನಿಲ್ದಾಣ ವಿನ್ಯಾಸದ ಕಲಾಕೃತಿ, ರನ್ ವೇ ಮೇಲೆ ಹಾರುವ ವಿಮಾನ ಹಾಗೂ ಅವರ ಹೆಸರಿರುವ ಕಲಾಕೃತಿಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ಚಿತ್ರಗಳು ಸಹ ವೈರಲ್ ಆಗಿವೆ.
ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ
ವಿಮಾನ ನಿಲ್ದಾಣದೊಂದಿಗೆ ಇತರೆ ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪ್ರಧಾನಿಯವರು ನೆರವೇರಿಸುವರು.
ಪ್ರಧಾನಿಯವರ ಕಾರ್ಯಕ್ರಮಕ್ಕೆ 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 2 ಕಡೆ ಊಟದ ವ್ಯವಸ್ಥೆ ಇದ್ದು ಒಂದೊಂದು ಕಡೆ 100 ಕೌಂಟರ್ ಗಳನ್ನು ತೆರೆಯಲಾಗುವುದು. ಕಾರ್ಯಕ್ರಮದ ವೀಕ್ಷಣೆಗೆ 4 ಕಡೆ ವಿಶಾಲವಾದ ಪ್ರಾಜೆಕ್ಟರ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲ ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರೆಲ್ಲರೂ ಬೆಳಗ್ಗೆ 10 ಗಂಟೆಯ ಒಳಗೆ ಕಾರ್ಯಕ್ರಮದ ಆವರಣದೊಳಗೆ ಬರಬೇಕು. ವಾಹನಗಳ ನಿಲುಗಡೆಗೆ ಶಿವಮೊಗ್ಗ- ಸಂತೇಕಡೂರು ರಸ್ತೆಯ ಎರಡೂ ಕಡೆ ಪಾರ್ಕಿಂಗ್ ವ್ಯವಸ್ಥೆ ಇದ್ದು, ನಿಗದಿಪಡಿಸಿದ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು.
ಇರಲಿ ಇವುಗಳ ಬಗ್ಗೆ ಎಚ್ಚರ
ಯಾರೂ ಕೂಡ ಕಪ್ಪು ಬಣ್ಣದ ಬಟ್ಟೆ, ಕರ್ಚೀಫ್ಗಳನ್ನು ಧರಿಸಿ ಬರುವಂತಿಲ್ಲ. ನೀರಿನ ಬಾಟಲ್, ಹ್ಯಾಂಡ್ ಬ್ಯಾಗ್ ಮತ್ತು ಕಪ್ಪು ಕರ್ಚೀಫ್ಗಳನ್ನು ತರುವಂತಿಲ್ಲ. ಮೊಬೈಲ್ ಮತ್ತು ಪರ್ಸ್ಗೆ ಮಾತ್ರ ಅವಕಾಶ ಇರುತ್ತದೆ. ಎರಡು ಹಂತದ ತಪಾಸಣೆ ಇರುತ್ತದೆ.
READ | ಶಿವಮೊಗ್ಗ ವಿಮಾನ ನಿಲ್ದಾಣ ಒಳಗಡೆ ಹೇಗಿದೆ? ಇಲ್ಲಿದೆ ಫೋಟೊ ಆಲ್ಬಂ
ಲೋಕಾರ್ಪಣೆಗೊಳ್ಳಲಿರುವ ಯೋಜನೆಗಳು
- ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ₹449.22 ಕೋಟಿ ವೆಚ್ಚದಲ್ಲಿ ಎಟಿಆರ್ 72 ರಿಂದ ಏರ್ಬಸ್ 320 ರವರೆಗೆ ಎಲ್ಲ ರೀತಿಯ ವಿಮಾನಗಳು ಹಗಲು- ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3.2 ಕಿ.ಮೀ ರನ್ ವೇ ಹಾಗೂ 4320 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್, ಏರ್ ಟ್ರಾಫಿಕಿಂಗ್ ಸೆಂಟರ್ ಇತರೆ ಸೌಲಭ್ಯಗಳೊಂದಿಗೆ ನಿರ್ಮಿಸಿರುವ ವಿಮಾನ ನಿಲ್ದಾಣ
- ಒಟ್ಟು ₹896.16 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ 44 ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ
- ಶಿಮುಲ್ ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿ ರೂ.45 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ₹2 ಲಕ್ಷ ಲೀಟರ್ ಸಾಮರ್ಥ್ಯದ ಹಾಲು, ಮೊಸರು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ ಕಟ್ಟಡ ಉದ್ಘಾಟನ ಹಾಗೂ ನಗರದ ಎಪಿಎಂಸಿ ಆವರಣದಲ್ಲಿ ರೂ.8 ಕೋಟಿ ವೆಚ್ಚಲ್ಲಿ ನಿರ್ಮಿಸಿರುವ ಮ್ಯಾಮ್ಕೋಸ್ನ 4 ಅಂತಸ್ತುಗಳ ಆಡಳಿತ ಕಚೇರಿ ಕಟ್ಟಡ.
READ | ಶಿವಮೊಗ್ಗಕ್ಕೆ ಎಷ್ಟು ಗಂಟೆಗೆ ಬರಲಿದ್ದಾರೆ ಪ್ರಧಾನಿ ಮೋದಿ, ಯಾವ ವಿಮಾನದಿಂದ ಆಗಮನ?
ಶಂಕುಸ್ಥಾಪನೆಗೊಳ್ಳುವ ಯೋಜನೆಗಳು
- ₹995 ಕೋಟಿ ವೆಚ್ಚದಲ್ಲಿ 103 ಕಿ.ಮೀ ಉದ್ದದ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗದ ಶಂಕುಸ್ಥಾಪನ್
- ₹97.18 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ₹862 ಕೋಟಿ ಮೊತ್ತದ ಕಾಮಗಾರಿ ಶಂಕುಸ್ಥಾಪನೆ ಮತ್ತು ₹91.50 ಕೋಟಿ ಮೊತ್ತದ ಕಾಮಗಾರಿ ಲೋಕಾರ್ಪಣೆ
- ₹66.44 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರು-ರಾಣೆಬೆನ್ನೂರು ರಸ್ತೆಯಲ್ಲಿ 14.77 ಕಿಮೀ ಉದ್ದದ ಶಿಕಾರಿಪುರ ಬೈಪಾಸ್ ನಿರ್ಮಾಣ
- ₹96.20 ಕೋಟಿ ವೆಚ್ಚದಲ್ಲಿ ರಾ.ಹೆ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಮೇಗರವಳ್ಳಿಯಿಂದ ಆಗುಂಬೆವರೆಗೆ 17.77 ಕಿ.ಮೀ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ.
- ₹56.56 ಕೋಟಿ ವೆಚ್ಚದಲ್ಲಿ ರಾ.ಹೆ 169 ಶಿವಮೊಗ್ಗ-ಮಂಗಳೂರು ರಸ್ತೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ ಬಳಿ 1.29 ಕಿ.ಮೀ ರಸ್ತೆ ನಿರ್ಮಾಣ ಮತ್ತು ತಿರುವಿನ ಅಭಿವೃದ್ದಿ.
Chandragutti Temple | ಚಂದ್ರಗುತ್ತಿ ಜಾತ್ರೆಗೆ ಜಿಲ್ಲಾಡಳಿತದ ಷರತ್ತುಗಳೇನು?