Anemia | ದೇಶದಲ್ಲಿ ಶೇ.56-60ರಷ್ಟು ತಾಯಂದಿರಲ್ಲಿ ರಕ್ತಹೀನತೆ! ಆರೋಗ್ಯ ಇಲಾಖೆಯಿಂದ ಖಡಕ್ ವಾರ್ನಿಂಗ್

anemia

 

 

ಸುದ್ದಿ ಕಣಜ.ಕಾಂ‌ ಶಿವಮೊಗ್ಗ
SHIVAMOGGA: ತಾಯಿ-ಮಗು ಆರೋಗ್ಯದಿಂದಿರಲು ರಕ್ತಹೀನತೆ(anemia)ಯಿಂದ ಮುಕ್ತಿ ಪಡೆಯಬೇಕು. ಆದ್ದರಿಂದ ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರದಿಂದ ಹಿಡಿದು ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ತಿಂಗಳು ಗರ್ಭಿಣಿಯರ ಹಿಮೊಗ್ಲೊಬಿನ್ ಪರೀಕ್ಷೆ ಮಾಡಬೇಕೆಂದು ಡಿಎಚ್‍ಓ ಡಾ.ರಾಜೇಶ್ ಸುರಗಿಹಳ್ಳಿ (Dr.Rajesh Suragihalli) ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಡಿಹೆಚ್‍ಓ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ’ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

READ | ಇನ್ಶೂರೆನ್ಸ್ ಕಂಪನಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ದಂಡ,‌ ಕಾರಣವೇನು? 

ತಾಯಿ ಮರಣಕ್ಕೆ ಅನಿಮಿಯಾ ಕಾರಣ
ತಾಯಿ ಮರಣಕ್ಕೆ ಮುಖ್ಯ ಕಾರಣ ಅನಿಮಿಯಾ. ಆದ್ದರಿಂದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಪ್ರತಿ ತಿಂಗಳು ಹಿಮೊಗ್ಲೊಬಿನ್ ಪರೀಕ್ಷೆ ನಡೆಸಿ, ರಕ್ತ ಕಡಿಮೆ ಇದ್ದರೆ ಸೂಕ್ತ ಚಿಕಿತ್ಸೆ ಮತ್ತು ರಕ್ತ ನೀಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲ ಪಿಎಚ್‍ಸಿಗಳಲ್ಲಿ ಐರನ್, ಫಾಲಿಕ್ ಆಸಿಡ್ ಮಾತ್ರೆಗಳು ಮತ್ತು ಜಂತುಹುಳು ನಿವಾರಣಾ ಮಾತ್ರಗಳ ಲಭ್ಯತೆ ಇದ್ದು, ನೀಡಬೇಕು ಎಂದು ಸೂಚಿಸಿದರು.

Health tips

ಆರ್‍.ಬಿಎಸ್‍ಕೆ ಅಡಿಯಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಹಾಗೂ ಪಿಎಚ್‍ಸಿ, ಸಿಎಚ್‍ಸಿ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳು ಮತ್ತು ಅಂಗನವಾಡಿಗಳಲ್ಲಿ ಹಿಮೊಗ್ಲೊಬಿನ್ ಪರೀಕ್ಷೆ ಮಾಡಲಾಗುವುದು. ಮೊದಲ ಹೆಜ್ಜೆಯಾಗಿ ಪರೀಕ್ಷೆ ನಡೆಸಲಾಗುವುದು. ನಂತರ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆ, ಇತರೆ ಇಲಾಖೆಗಳ ಸಹಕಾರದೊಂದಿಗೆ ಜಂಟಿ ಸರ್ವೇ, ಅಂಗನವಾಡಿ ಮಕ್ಕಳಿಗೆ ಐರನ್ ಮತ್ತು ಫಾಲಿಕ್ ಆಸಿಡ್ ಸಿರಪ್, ದೊಡ್ಡವರಿಗೆ ಮಾತ್ರೆ, ಜಂತುಹುಳು ನಿವಾರಕ ಆಲ್ಬೆಂಡಜಾಲ್ ಮಾತ್ರೆಗಳನ್ನು ನೀಡುವುದು ಸೇರಿದಂತೆ ಅನೀಮಿಯಾ ಮುಕ್ತಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಮುದಾಯದಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲಾಗುವುದು. ಪೌಷ್ಟಿಕತೆಗೆ ಆದ್ಯತೆ ನೀಡುವ ಆಹಾರ ಕ್ರಮಗಳನ್ನು ಜನರಿಗೆ ತಿಳಿಸಲಾಗುವುದು.
ಡಾ.ನಾಗರಾಜ್ ನಾಯ್ಕ್, ಆರ್‍.ಸಿಎಚ್ ಅಧಿಕಾರಿ

ಸಮೀಕ್ಷೆಗೆ ಪೂರ್ಣ ಸಹಕಾರ ನೀಡಿ
ಪ್ರಸ್ತುತ ರಾಜ್ಯದಲ್ಲಿ ಎನ್‍ಎಫ್‍ಎಚ್‍ಎಸ್ (ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ)ಗೆ ಎಲ್ಲ ವೈದ್ಯಾಧಿಕಾರಿಗಳು, ಸಿಬ್ಬಂದಿ ಕ್ಷೇತ್ರದಲ್ಲಿ ಹಾಜರಿದ್ದು, ಸರ್ವೇ ಕಾರ್ಯಕ್ಕೆ ಸಹಕರಿಸಬೇಕು. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಸುರಗೀಹಳ್ಳಿ ತಿಳಿಸಿದರು.

DHO
‘ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ’ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಡಿಎಚ್.ಓ ಡಾ.ರಾಜೇಶ್‌ ಸುರಗೀಹಳ್ಳಿ‌ ಉದ್ಘಾಟಿಸಿದರು.

ದೇಶದಲ್ಲಿ ಶೇ.56 ರಿಂದ 60 ಜನ ಅನಿಮಿಯಾಗೆ ಗುರಿ
ಆರ್‍.ಸಿಎಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, 2023-24ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದಲ್ಲಿ ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರು ಮತ್ತು ಸಂತಾನೋತ್ಪತ್ತಿರಯ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಸಮಗ್ರ ಪರೀಕ್ಷೆ, ಚಿಕಿತ್ಸೆ, ಅರಿವು ಮೂಡಿಸುವಿಕೆ ಮತ್ತು ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲವರ್ಧನೆಗಾಗಿ ಸರ್ಕಾರ ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದರು.
ದೇಶದಲ್ಲಿಯೇ ಕರ್ನಾಟಕ ಅನೀಮಿಯಾ ಕುರಿತು ಹೆಚ್ಚಿನ ಕಾಳಜಿ ಹೊಂದಿದೆ. ದೇಶದಲ್ಲಿ ಶೇ.56 ರಿಂದ 60 ಜನರು ಅನಿಮಿಯಾದಿಂದ ಬಳಲುತಿದ್ದು, ಇದನ್ನು ತಡೆಯಲು ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಅನೀಮಿಯಾ ತಡೆ ಕುರಿತು ತರಬೇತಿ ನಡೆಸಲಾಗುತ್ತಿದೆ. ತರಬೇತಿ ಹೊಂದಿದ ವೈದ್ಯರು/ಸಿಬ್ಬಂದಿ ತಮ್ಮ ಕೆಳ ಹಂತದಲ್ಲಿ ತರಬೇತಿ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಗುಡುದಪ್ಪ ಕಸಬಿ, ಡಾ.ಶಮಾ, ಡಾ,ಕಿರಣ್, ಡಾ.ಮಲ್ಲಪ್ಪ, ಡಾ.ಹರ್ಷವರ್ಧನ್, ಟಿಎಚ್‍ಓ ಡಾ.ಚಂದ್ರಶೇಖರ್, ತಾಲ್ಲೂಕು ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿ ಹಾಜರಿದ್ದರು.

error: Content is protected !!