Kidwai hospital | ಶಿವಮೊಗ್ಗದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಶಿಲಾನ್ಯಾಸ, ಏನೆಲ್ಲ ಸೌಕರ್ಯ ಇರಲಿವೆ?, 5 ವರ್ಷದಲ್ಲಿ ರಾಜ್ಯದ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ

Kidwai hospital Sharnaprakash patil

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದಿಂದ ಸುತ್ತಮುತ್ತಲಿನ ಜಿಲ್ಲೆಯ ಜನ ಸಾಮಾನ್ಯರಿಗೆ ಅತ್ಯಂತ ಉಪಯೋಗವಾಗಲಿದ್ದು, ಗುಣಮಟ್ಟದ ಕಾಮಗಾರಿಯೊಂದಿಗೆ ಶೀಘ್ರದಲ್ಲಿ ಸೇವೆಗೆ ಲಭ್ಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಆರ್.ಪಾಟೀಲ್ ಹೇಳಿದರು.
ಮೆಗ್ಗಾನ್ ಆಸ್ಪತ್ರೆ ಬಳಿ ನೂತನವಾಗಿ ಆರಂಭಿಸಲಾಗುತ್ತಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ಕಾಮಗಾರಿ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಉಸ್ತುವಾರಿ ಸಚಿವರ ಆಸಕ್ತಿ ಮತ್ತು ಪ್ರಯತ್ನದಿಂದ ಕಾನೂನು ತೊಡಕು ನಿವಾರಣೆಯಾಗಿ ಕ್ಯಾನ್ಸರ್ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿದೆ.

READ | ರಾಜ್ಯದಲ್ಲಿ 600 ಕೆಪಿಎಸ್ ಶಾಲೆ ಆರಂಭಿಸುವುದಾಗಿ ಘೋಷಿಸಿದ ಮಧು ಬಂಗಾರಪ್ಪ, ಪರೀಕ್ಷೆ ಬದಲಾವಣೆಯ ಬಗ್ಗೆ ಹೇಳಿದ್ದೇನು?

ಏನೆಲ್ಲ ಸೌಕರ್ಯ ಲಭ್ಯ?

SHARANAPRAKASH PATIL MINISTER
ಡಾ.ಶರಣಪ್ರಕಾಶ ಆರ್.ಪಾಟೀಲ್

ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಯಿಂದಾಗಿ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆ ಸಿವಿಲ್ ಕಾಮಗಾರಿಗೆ 50 ಕೋಟಿ ರೂ. ಮಂಜೂರಾಗಿದ್ದು, 120 ಬೆಡ್ ಸಾಮಥ್ರ್ಯದ ಆಸ್ಪತ್ರೆ ನಿರ್ಮಾಣವಾಗಲಿದೆ. ಕೀಮೊ, ರೇಡಿಯೋ ಥೆರಪಿ ಸೇರಿದಂತೆ ಅಗತ್ಯವಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು. ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗದ ಕಾರ್ಡಿಯಾಲಜಿ ಘಟಕದಲ್ಲಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಸೇವೆ ನೀಡಲಾಗುತ್ತಿದ್ದು, ಪೂರ್ಣ ಪ್ರಮಾಣದ ಕಾರ್ಯಾಚರಣೆ ಕುರಿತು ಪರಿಶೀಲಿಸಿ, ಅಭಿವೃದ್ದಿಗೆ ಪ್ರಯತ್ನಿಸಲಾಗುವುದು ಎಂದರು.
ಮುಂದಿನ 5 ವರ್ಷಗಳಲ್ಲಿ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ
ಬಡವರ ಮಕ್ಕಳು ಸಹ ಡಾಕ್ಟರ್ ಆಗಬೇಕೆಂಬ ಉದ್ದೇಶದಿಂದ ರಾಜ್ಯಾದ್ಯಂತ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲೇ ಅತ್ಯಧಿಕ 70 ಮೆಡಿಕಲ್ ಕಾಲೇಜುಗಳಿದ್ದು ಇದರಲ್ಲಿ 25 ಸರ್ಕಾರಿ ಕಾಲೇಜುಗಳಾಗಿವೆ. ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ವಿಭಾಗಗಳ ಕೇಂದ್ರ ಸ್ಥಾನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿದ್ದು, ತುಮಕೂರು, ಮಂಡ್ಯ, ಮೈಸೂರಿನಲ್ಲಿ ಕೆಲಸ ನಡೆಯುತ್ತಿದೆ. ಕಲ್ಬುರ್ಗಿಯಲ್ಲಿ ಸೇವೆ ಆರಂಭಿಸಲಾಗಿದೆ. ಮುಂದಿನ 5 ರ್ಷಗಳಲ್ಲಿ ಪ್ರತಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
ಜನ ಸಾಮಾನ್ಯರು, ಬಡವರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ನೀಡುವುದು ಸರ್ಕಾರದ ಉದ್ದೇಶವಾಗಿದ್ದು, ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಯನ್ನು 18 ತಿಂಗಳ ಒಳಗೆ ಮುಗಿಸಿ ಆಸ್ಪತ್ರೆಗೆ ಅಗತ್ಯವಾದ ಮೂಲಸೌಕರ್ಯ, ಉಪಕರಣ, ತಂತ್ರಜ್ಞಾನದ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಯಾರು ಏನೆಂದರು?
ನೆರೆಯ ಜಿಲ್ಲೆಗಳಿಗೆ ಚಿಕಿತ್ಸೆ ಹೋಗುವುದು ತಪ್ಪಲಿದೆ
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಮಾತನಾಡಿ, ಈ ಜಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಇದ್ದ ಕಾನೂನಿನ ತೊಡಕನ್ನು ನಿವಾರಿಸಿದ ಅಡ್ವೊಕೇಟ್ ಜನರಲ್ ಹಾಗೂ ಶ್ರಮಿಸಿದ ಎಲ್ಲರಿಗೆ ಧನ್ಯವಾದಗಳು. ಕ್ಯಾನ್ಸರ್ ಆಸ್ಪತ್ರೆಗೆ ನಿರ್ಮಾಣಕ್ಕೆ ಸರ್ಕಾರ ರೂ.100 ಕೋಟಿ ಮಂಜೂರು ಮಾಡಿದ್ದು, ಆದಷ್ಟು ಬೇಗ, ಗುಣಮಟ್ಟದೊಂದಿಗೆ ಆಸ್ಪತ್ರೆ ನಿರ್ಮಾಣಗೊಂಡು ಸೇವೆಗೆ ಸಿದ್ದವಾಗಬೇಕು. ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಟಿ ಸೇವೆಯೂ ಇದ್ದು, ವೈದ್ಯಕೀಯ ಶಿಕ್ಷಣ ಸಚಿವರು ಇನ್ನಷ್ಟು ಸಹಕಾರ ನೀಡಿದಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಆಸ್ಪತ್ರೆ ಕಾರ್ಯನಿರ್ವಹಿಸುವ ಮೂಲಕ ಹೊರ ಜಿಲ್ಲೆಗಳಾದ ಮಂಗಳೂರು, ಬೆಂಗಳೂರು ಮತ್ತು ದಾವಣಗೆರೆಗೆ ರೋಗಿಗಳು ಚಿಕಿತ್ಸೆಗಾಗಿ ಹೋಗುವುದು ತಪ್ಪುತ್ತದೆ. ಆದ್ದರಿಂದ ಮಲೆನಾಡಿಗೆ ಹೆಚ್ಚು ಸೌಲಭ್ಯಗಳನ್ನು ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ಲೋಕೇಶ್ ಮಾತನಾಡಿ, ನೂತನವಾಗಿ ಮೆಗ್ಗಾನ್ ಆರಂಭಿಸಲಾಗುವು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯಗಳನ್ನು ಶಿಸ್ತಿನಿಂದ ನಿರ್ವಹಿಸಲಾಗುವುದು. ಪ್ರತಿ ವರ್ಷ ದೇಶದಲ್ಲಿ 14 ಲಕ್ಷ ಹೊಸ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಾರೆ. ರಾಜ್ಯದಲ್ಲಿ ಪ್ರತಿ ವರ್ಷ 80 ಸಾವಿರ ಪತ್ತೆಯಾದರೆ ಶಿವಮೊಗ್ಗ ಸುತ್ತಮುತ್ತ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೊಸ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಾರೆ. ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಯಿಂದ ಮಧ್ಯ ಕರ್ನಾಟಕ ಭಾಗದ ಸುತ್ತಮತ್ತಲಿನ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಇಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಅಭಿವೃದ್ದಿಗೆ ಯೋಜನೆ ರೂಪಿಸಿದ್ದೇವೆ ಎಂದರು.
ಬಹುದಿನಗಳ ಕನಸು ನನಸು
ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಆಗಬೇಕೆಂಬ ಬಹು ದಿನದ ಕನಸು ನನಸಾಗಿದೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಅತಿಯಾದ ಜನಸಂದಣಿ ಇರುತ್ತದೆ. ಎಲ್ಲರಿಗೂ ಅಲ್ಲಿ ಚಿಕಿತ್ಸೆ ಕಷ್ಟ ಆದ್ದರಿಂದ ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಕಲ್ಬುರ್ಗಿ ಹೀಗೆ ಬೇರೆ ಬೇರೆ ಕಡೆ ಕ್ಯಾನ್ಸರ್ ಆಸ್ಪತ್ರೆ ತೆರೆದರೆ ಬಡವರು ಬದುಕುತ್ತಾರೆ. ಆದಷ್ಟು ಬೇಗ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಬಡವರ ಸೇವೆ ಆರಂಭಿಸಲಿ. ಆಸ್ಪತ್ರೆ ಸ್ಥಾಪನೆಯಂತಹ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ನುಡಿದರು.
ಸಿಮ್ಸ್ ನಲ್ಲಿರುವ ಸಮಸ್ಯೆಗಳಿಗೆ ಬೇಕಿದೆ ಪರಿಹಾರ
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕ್ಯಾನ್ಸರ್ ಆಸ್ಪತ್ರೆ ಆಗುತ್ತಿರುವುದು ಒಂದೊಳ್ಳೆ ಕೆಲಸ. ಶೀಘ್ರದಲ್ಲಿ ಕೆಲಸಗಳು ಪೂರ್ಣಗೊಳ್ಳಲಿ. ಸಿಮ್ಸ್ ಕಾಲೇಜಿನಲ್ಲಿ ಅನೇಕ ಸಮಸ್ಯೆಗಳಿದ್ದು ಆಡಳಿತವನ್ನು ಬಿಗಿಗೊಳಿಸಿ ಸಮಸ್ಯೆಗಳನ್ನು ಪರಿಹರಿಸಿದರೆ ಅನುಕೂಲವಾಗುತ್ತದೆ ಎಂದರು.
ಶಾಸಕರಾದ ಸಂಗಮೇಶ್ವರ್, ಪಾಲಿಕೆ ಸದಸ್ಯ ಯೋಗೇಶ್, ರೇಖಾ ರಂಗನಾಥ್, ಮಾಜಿ ವಿಧಾನ ಪರಿಷತ್ ಶಾಸಕ ಆರ್.ಪ್ರಸನ್ನಕುಮಾರ್, ಡಿಎಂಇ ಡಾ.ಸುಜಾತಾ ರಾಠೋಡ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಮುಖ್ಯ ಇಂಜಿನಿಯರ್ ಬಿ.ಕೆ ಪವಿತ್ರ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ ಇತರರು ಹಾಜರಿದ್ದರು.

Shimoga Railway station | ರೈಲ್ವೆ ನಿಲ್ದಾಣ ಸಮೀಪ ಭಯ ಹುಟ್ಟಿಸಿದ ಬಾಕ್ಸ್, ಉಪ್ಪಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಎಸ್.ಪಿ, ಉಪ್ಪು ತಂದವರಿಗೆ ನೀರು ಕುಡಿಸಿದ ಖಾಕಿ

error: Content is protected !!