ಸಿಲಿಂಡರ್ ಹೊತ್ತು ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಜಿಲ್ಲಾ ಕಾಂಗ್ರೆಸ್ ವಿನೂತನ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದ ಪಕ್ಷದ ಕಾರ್ಯಕರ್ತರು ಜನ ಸಾಮಾನ್ಯರಿಗೆ ಹೊರೆ ಆಗುವಂತೆ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಗೃಹ ಬಳಕೆ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ. ಕೊರೊನಾ ಆರ್ಥಿಕ ಸಂಕಷ್ಟದಲ್ಲಿ ಬೆಲೆ ಏರಿಕೆಯ ಬಿಸಿಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ರಕ್ಷಿಸಲು ಸಂಪೂರ್ಣ ವಿಫಲವಾಗಿದೆ. ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ವಿದ್ಯುತ್ ದರ, ಅಗತ್ಯ ವಸ್ತುಗಳು, ಆಸ್ತಿ ತೆರಿಗೆ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು.
– ಎಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಸಬ್ಸಿಡಿಗೂ ಕೊಕ್: ವರ್ಷಕ್ಕೆ 12 ಗೃಹ ಬಳಕೆ ಎಲ್.ಪಿ.ಜಿ. ಸಿಲಿಂಡರ್‍ಗಳನ್ನು ಪ್ರತಿ ಕುಟುಂಬಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕಳೆದ ಆರು ತಿಂಗಳುಗಳಿಂದ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.
ಇವೆಲ್ಲವುಗಳ ಮಧ್ಯೆ ತಿಂಗಳ ಅವಧಿಯಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಇದರ ಅಡ್ಡಪರಿಣಾಮ ವಾಹನ ಸವಾರರ ಮೇಲಾಗಿದೆ. ಅಲ್ಲದೇ, ತೈಲ ಬೆಲೆ ಏರಿಕೆ ರೈತರ ಮೇಲೆಯೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ವಿದ್ಯುತ್ ಕಂಪೆನಿಗಳು ನಷ್ಟದ ಹೊರೆ ಸರಿದೂಗಿಸಲು ಜನವರಿ 1 ರಿಂದ ಮಾರ್ಚ್ 31ರವರೆಗೆ ಸೀಮಿತವಾಗಿ ಪ್ರತಿ ಯುನಿಟ್ ವಿದ್ಯುತ್ ದರದಲ್ಲಿ 4 ರಿಂದ 8 ಪೈಸೆವರೆಗೆ ಹೆಚ್ಚಳ ಮಾಡಿವೆ. ನವೆಂಬರ್ ನಿಂದ ಈಚೆಗೆ ಎರಡು ಸಲ ವಿದ್ಯುತ್ ದರ ಏರಿಕೆ ಮಾಡಲಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಮುಖಂಡರಾದ ಎನ್.ರಮೇಶ್, ಕಲಗೋಡು ರತ್ನಾಕರ್, ತೀ.ನಾ.ಶ್ರೀನಿವಾಸ್, ಬಿ.ಎ.ರಮೇಶ್ ಹೆಗ್ಡೆ, ಎಸ್.ಪಿ.ಶೇಷಾದ್ರಿ, ಎಲ್.ರಾಮೇಗೌಡ, ನಯಾಜ್ ಅಹಮ್ಮದ್, ಇಕ್ಕೇರಿ ರಮೇಶ್, ಯು.ಶಿವಾನಂದ್, ವಿಶ್ವನಾಥ್ ಕಾಶಿ, ಚಂದನ್, ಸುವರ್ಣ ನಾಗರಾಜ್, ವಿಜಯಲಕ್ಷ್ಮಿ ಪಾಟೀಲ್, ಸಿ.ಜೆ. ಮಧುಸೂದನ್, ಕೆ.ಚೇತನ್, ಎಚ್.ಪಿ.ಗಿರೀಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!