ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2023ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ 2023ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ.
2023ನೇ ಅವಧಿಯಲ್ಲಿ ಪ್ರಕಟವಾದ ಕಾವ್ಯ, ನವಕವಿಗಳ ಪ್ರಥಮ ಕವನಸಂಕಲನ, ಕಾವ್ಯ ಹಸ್ತಪ್ರತಿ, ಕಾದಂಬರಿ, ಸಣ್ಣಕತೆ, ನಾಟಕ, ಲಲಿತಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ/ ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ, ಸಂಶೋಧನೆ, ವೈಚಾರಿಕ/ಅಂಕಣಬರಹ, ಅನುವಾದ-1 ಮತ್ತು 2, ಲೇಖಕರ ಮೊದಲ ಸ್ವತಂತ್ರಕೃತಿ, ಕನ್ನಡದಿಂದ ಇಂಗ್ಲೀಷಿಗೆ ಅನುವಾದ, ದಾಸ ಸಾಹಿತ್ಯ, ಸಂಕೀರ್ಣ ಕೃತಿಗಳ ತಲಾ 4 ಪ್ರತಿಗಳನ್ನು ರಿಜಿಸ್ಟಾçರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-02 ಇವರಿಗೆ ರಿಜಿಸ್ಟರ್ ಅಂಚೆ/ ಕೊರಿಯರ್ ಮೂಲಕ ಅಥವಾ ಖುದ್ದಾಗಿ ಆಗಸ್ಟ್ 31 ರೊಳಗಾಗಿ ಸಲ್ಲಿಸುವುದು.
ಇದರೆಡೆಗೆ ಗಮನವಿರಲಿ
* ಕಳುಹಿಸುವ ಕೃತಿಯ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯದ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು.
* ಮರುಮುದ್ರಣವಾದ ಪುಸ್ತಕಗಳು, ಪಿಎಚ್.ಡಿ. ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳು, ಪಠ್ಯಪುಸ್ತಕಗಳು, ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳು, ಈಗಾಗಲೇ ಕ.ಸಾ.ಅ.ಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು, ಒಂದು ಪ್ರಕಾರದಲ್ಲಿ ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಮತ್ತದೇ ಪ್ರಕಾರದಲ್ಲಿ ಮುಂದಿನ ಮೂರು ವರ್ಷದವರೆಗೆ ಪರಿಗಣಿಸುವುದಿಲ್ಲ.
* ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ದೂ.ಸಂ.: 080-22211730/22106460 ಹಾಗೂ ವೆಬ್‌ಸೈಟ್ www.sahithyaacademy.karnataka.gov.in ಗಳನ್ನು ಸಂಪರ್ಕಿಸುವುದು.
ಮದರಸಗಳಿಗೆ ಅನುದಾನ, ಪ್ರಸ್ತಾವನೆ ಸಲ್ಲಿಸಿ
SHIMOGA: 2024-25ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯು ರಾಜ್ಯದಲ್ಲಿ ನಡೆಸಲಾಗುತ್ತಿರುವ ಮುಸ್ಲಿಂ ಸಮುದಾಯದ ನೊಂದಾಯಿತ ಮದರಸಗಳ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡಲು ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 2 ಮದರಸಗಳನ್ನು ಜಿಲ್ಲಾ ಹಂತದಲ್ಲಿ ಜಿಲ್ಲಾ ಅಧಿಕಾರಿಗಳ ಅನುಮೋದನೆಯೊಂದಿಗೆ ಅಯ್ಕೆ ಮಾಡಲಾಗುತ್ತಿದ್ದು, ಅರ್ಹ ಮದರಸಗಳಿಂದ ಪ್ರಸ್ತಾವನೆ ಆಹ್ವಾನಿಸಿದೆ.
ಈ ಅಂಶಗಳನ್ನು ಗಮನಿಸಿ
* ಸ್ವಂತ ಕಟ್ಟಡವನ್ನು ಹೊಂದಿರುವ ವಕ್ಫ್ ಮದರಸದಲ್ಲಿ ಕನಿಷ್ಠ 10 ಮಕ್ಕಳ ದಾಖಲಾತಿ ಸಂಖ್ಯೆಯಿರಬೇಕು.
* ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಹಾಗೂ ಮೂಲಸೌಕರ್ಯಗಳ ಅತಿ ಅಗತ್ಯವಿರುವ ಮದರಸಗಳನ್ನು ಆಯ್ಕೆ ಮಾಡಲಾಗುವುದು.
* ಈಗಾಗಲೇ ಇದೇ ಉದ್ದೇಶಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುದಾನ ಪಡೆದ ಮದರಸಗಳನ್ನು ಪರಿಗಣಿಸುವುದಿಲ್ಲ.
* ಅರ್ಹ ಮದರಸಗಳಿಗೆ ಒಂದು ಬಾರಿಗೆ ಗರಿಷ್ಠ ₹5 ಲಕ್ಷಗಳ ಅನುದಾನ ಮಂಜೂರು ಮಾಡಲಾಗುವುದು.
ಆಸಕ್ತ ಮದರಸ ಸಂಸ್ಥೆಗಳು ಅರ್ಜಿ ನಮೂನೆಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜುಲೈ 30ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220206 ನ್ನು ಸಂಪರ್ಕಿಸುವುದು.
READ | ಕಾರ್ಖಾನೆಯಲ್ಲಿ ಕಳವು ಮಾಡಿದ ಆರೋಪಿಗಳು ಅರೆಸ್ಟ್, ಅವರ ಬಳಿ ಸಿಕ್ಕಿದ್ದೇನು?
ಲೈಸೆನ್ಸ್ ಪ್ರದರ್ಶನ ಕಡ್ಡಾಯ
SHIMOGA: ಜಿಲ್ಲೆಯಲ್ಲಿ ಲೇವಾದೇವಿ ನಡೆಸುತ್ತಿರುವ ಲೇವಾದೇವಿಗಾರರು, ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು, ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆಯನ್ನು ಕಡ್ಡಾಯವಾಗಿ ಪ್ರದರ್ಶಿಸತಕ್ಕದ್ದು.
ಕರ್ನಾಟಕ ಲೇವಾದೇವಿ ಅಧಿನಿಯಮ 1961ರ ಪ್ರಕರಣ 28 ರಡಿ ಸರ್ಕಾರವು ನಿಗದಿಪಡಿಸಿರುವ ಬಡ್ಡಿದರ ಭದ್ರತಾ ಸಾಲಗಳಿಗೆ ವಾರ್ಷಿಕ ಶೇ.14 ರಷ್ಟು, ಭದ್ರತಾ ರಹಿತ ಸಾಲಗಳಿಗೆ ವಾರ್ಷಿಕ ಶೇ.16ರಷ್ಟು ಬಡ್ಡಿಯನ್ನು ಮಾತ್ರ ವಿಧಿಸತಕ್ಕದ್ದು. ಸರ್ಕಾರವು ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರ ಪಡೆದ ಬಗ್ಗೆ ಪರಿವೀಕ್ಷಣೆಯಲ್ಲಿ ಕಂಡುಬಂದಲ್ಲಿ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸದರಿಯವರ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.
ಕ್ಯಾಂಪಸ್ ಕಟ್ಟೆಗೆ 50ರ ಸಂಭ್ರಮ
BHADRAVATHI: ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕಾಗಿಯೇ ರೂಪಿತವಾದ ಆಕಾಶವಾಣಿ ಭದ್ರಾವತಿಯ ಕ್ಯಾಂಪಸ್‌ಕಟ್ಟೆ 50ನೇ ಕಾರ್ಯಕ್ರಮವು ಜು.25ರಂದು ಬೆಳಗ್ಗೆ 10ರಿಂದ 11 ಗಂಟೆಯವರೆಗೆ ನೇರಪ್ರಸಾರದಲ್ಲಿ ಪ್ರಸಾರವಾಗಲಿದೆ.
ಕ್ಯಾಂಪಸ್‌ಕಟ್ಟೆ ಎನ್ನುವ ಕಾರ್ಯಕ್ರಮದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೇರಪ್ರಸಾರದಲ್ಲಿ ವಿವಿಧ ಮಹನೀಯರು, ಸಾಹಿತಿಗಳು, ಸಾಧಕರು ಮತ್ತು ಆಯ ಪ್ರದೇಶದ ವಿಶೇಷತೆಯನ್ನು ತಿಳಿಸುತ್ತಾರೆ. ಪ್ರತೀ ಕಾರ್ಯಕ್ರಮದಲ್ಲಿ 6 ರಿಂದ 8 ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳು ಮಾಹಿತಿ ನೀಡಿದ ಮಹನೀಯರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾರ್ವಜನಿಕರಿಗೆ ನೀಡಿ ಅವರಿಂದ ವಾಟ್ಸಪ್ ಮುಖಾಂತರ ಉತ್ತರ ಪಡೆದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಚಿತ್ರಗೀತೆಗಳ ಸಂಗಮವಾದ ಈ ಕಾರ್ಯಕ್ರಮದಲ್ಲಿ ಇದುವರೆಗೆ ವಿವಿಧ ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಕಾಲೇಜಿನಿಂದ ನೇರಪ್ರಸಾರದಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮದ ಹೆಗ್ಗಳಿಕೆಯಾಗಿದೆ.
ಜು.25ರಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೆ MPMES ಸ್ವತಂತ್ರ ಪದವಿಪೂರ್ವಕಾಲೇಜು ಭದ್ರಾವತಿಯ ಕ್ಯಾಂಪಸ್‌ನಿಂದ ನೇರಪ್ರಸಾರವಾಗಲಿದೆ ಎಂದು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು FM 103.5 ಹಾಗೂ MW 675 khz ನಲ್ಲಿ ಕೇಳುವದರೊಟ್ಟಿಗೆ ಜಗತ್ತಿನಾದ್ಯಂತ Akashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು.