ಕುವೆಂಪು ರಚನೆಯ ನಾಡಗೀತೆಯಲ್ಲಿ ಮಹಿಳೆಯರ ಹೆಸರು ಏಕಿಲ್ಲ? ಗಂಭೀರ ಚರ್ಚೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡ ಗೀತೆಯಲ್ಲಿ ಮಹಿಳೆಯ ಹೆಸರು ಏಕಿಲ್ಲ? ಎಂಬ ಗಂಭೀರ ಚರ್ಚೆಗೆ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಯಿತು.
ಗೋಪಿಶೆಟ್ಟಿಕೊಪ್ಪದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಸೋಮವಾರ ಸಮ್ಮೇಳನಾಧ್ಯಕ್ಷರ ಸಂವಾದ ಗೋಷ್ಠಿಯಲ್ಲಿ ಈ ಪ್ರಶ್ನೆ ಉದ್ಭವಿಸಿತು.
ನಾಡಗೀತೆಯಲ್ಲಿ ಕುವೆಂಪು ಅವರು ಮಹಿಳೆಯ ಹೆಸರನ್ನು ಹೇಳಿಲ್ಲ. ಅಕ್ಕ ಸೇರಿದಂತೆ ಈ ನಾಡಿನಲ್ಲಿ ಪುರುಷರಷ್ಟೇ ಸಮರ್ಥವಾಗಿ ಮಹಿಳೆಯರು ಸಾಹಿತ್ಯವನ್ನು ರಚಿಸಿದ್ದಾರೆ. ಆದರೆ ರಾಷ್ಟ್ರಕವಿ ಕುವೆಂಪು ಅವರು ಅದೇಕೆ ಮಹಿಳೆಯ ಹೆಸರು ಕೈಬಿಟ್ಟರು ಗೊತ್ತಿಲ್ಲ ಎಂದು ಸಮ್ಮೇಳನ ಸರ್ವಾಧ್ಯಕ್ಷೆ ಡಾ.ವಿಜಯಾದೇವಿ ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಸಂವಾದಗೋಷ್ಠಿಯಲ್ಲಿ ಡಾ.ಎನ್.ಆರ್.ಮಂಜುಳಾ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸರ್ವಾಧ್ಯಕ್ಷರು, ನಾಡಗೀತೆಯಲ್ಲಿ ಮಹಿಳೆಯರ ಸ್ಮರಣೆ ಇಲ್ಲ ಎನ್ನುವುದು ನಿಜ. ಆದರೆ, ಸರ್ಕಾರ ಇದನ್ನು ನಾಡಗೀತೆಯಾಗಿ ಮಾಡಿರುವುದರಿಂದ ನಾವು ಒಪ್ಪಿಕೊಳ್ಳಬೇಕು. ಎಷ್ಟಾದರೂ ಮಹಿಳೆ ಕ್ಷಮೆಯ ಗುಣವನ್ನು ಹೊಂದಿದ್ದಾಳೆ ಎಂದು ಚರ್ಚೆಯನ್ನು ಅಲ್ಲಿಗೆ ಮೊಟಕುಗೊಳಿಸಿದರು.
ಸಂವಾದದಲ್ಲಿ ಕವಯತ್ರಿ ಶೀಲಾಸುರೇಶ್, ಮಮತ ಹೆಗಡೆ, ಲಕ್ಷ್ಮೀಶಾಸ್ತ್ರಿ, ಶಾಲಿನಿ, ರುಕ್ಮಿಣಿ ಆನಂದ್, ವಿನೋದ ಆನಂದ್, ಶಾಲಿನಿ ರಾಮಸ್ವಾಮಿ, ಜಿ.ಎಸ್.ಸರೋಜ, ಪದ್ಮಾಸುರೇಶ್, ಕೆ.ವೈ.ರಾಮಚಂದ್ರಪ್ಪ ಮುಂತಾದವರು ಪಾಲ್ಗೊಂಡಿದ್ದರು.
ಕ.ಸಾ.ಪ.ಗೌರವ ಕಾರ್ಯದರ್ಶಿ ರುದ್ರಮುನಿ ಎನ್.ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್.ಎನ್.ಮಹಾರುದ್ರ ಆಶಯ ನುಡಿಗಳನ್ನಾಡಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಉಪಸ್ಥಿತರಿದ್ದರು. ಹಾಲೇಶ್ ನವಿಲೆ ಸ್ವಾಗತಿಸಿದರು, ರಂಜನಿ ದತ್ತಾತ್ರಿ ನಿರೂಪಿಸಿದರು.

error: Content is protected !!